ಮಂಗಳೂರು: ತ್ರಿಷಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ 28ನೇ ಸಂಸ್ಥಾಪನಾ ದಿನಾಚರಣೆಯನ್ನು ಆ.10ರಂದು ಬಲ್ಮಠದ ಡಾನ್ ಬಾಸ್ಕೊ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ 9.30ಕ್ಕೆ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸ್ವಾಗತ ನೃತ್ಯ ಹಾಗೂ ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ತ್ರಿಷಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜುನಾಥ ಕಾಮತ್ ಸ್ವಾಗತ ಭಾಷಣ ಮಾಡಿ, ಸಂಸ್ಥೆಯ 28 ವರ್ಷಗಳ ಶೈಕ್ಷಣಿಕ ಸೇವೆಯ ಹೆಜ್ಜೆಗುರುತುಗಳನ್ನು ಸ್ಮರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ನಡೆದವು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ತ್ರಿಷಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ ಕಾರ್ಕಟ್ಟೆ ಆಗಮಿಸಿ ಆಶಯ ನುಡಿಗಳನ್ನಾಡಿದರು. ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಸಂಸ್ಥಾಪನಾ ದಿನಾಚರಣೆಯ ಪ್ರಮುಖ ಆಕರ್ಷಣೆಯಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಣ, ಕೈಗಾರಿಕೆ, ಯಕ್ಷಗಾನ, ವೈದ್ಯಕೀಯ, ಕ್ರೀಡೆ, ಸಮಾಜಸೇವೆ, ರೆಡ್‌ಕ್ರಾಸ್ ಸೇವೆ, ಸೇನೆ, ಚಿತ್ರರಂಗ ಹಾಗೂ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಎಸ್‌ಡಿಎಂ ಕಾಲೇಜು–ಎಂಬಿಎ, ಮಂಗಳೂರಿನ ಮಾಜಿ ನಿರ್ದೇಶಕ ಡಾ. ದೇವರಾಜ್ ಕೆ., ಕೈಗಾರಿಕಾ ಕ್ಷೇತ್ರದಲ್ಲಿ ಕೆಸಿಸಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈತ್ರೇಯ ಎ., ಯಕ್ಷಗಾನ ಕ್ಷೇತ್ರದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮಧುಸೂದನ್ ಇ., ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್ ಕುಮಾರಿ ಶ್ರೀಮಾ ಪ್ರಿಯದರ್ಶಿನಿ, ಸಮಾಜ ಸೇವಾ ಕ್ಷೇತ್ರದಲ್ಲಿ ಮಾರುತಿ ಜನಸೇವಾ ಸಂಘ ಉಳ್ಳಾಲದ ಅಧ್ಯಕ್ಷ ಅನಿಲ್ ಚರಣ್, ರೆಡ್‌ಕ್ರಾಸ್ ಸೇವೆಗಾಗಿ ಸಿಎ ಶಾಂತಾರಾಮ ಶೆಟ್ಟಿ, ಸೇನಾ ಕ್ಷೇತ್ರದಲ್ಲಿ ಭಾರತೀಯ ನೌಕಾಪಡೆಯ ಮಾಜಿ ಮುಖ್ಯ ತಾಂತ್ರಿಕ ಅಧಿಕಾರಿ ವಿಕ್ರಮದತ್ತ, ಚಿತ್ರರಂಗ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಕುಮಾರಿ ರೂಪಾ ರ್ಕಾಡಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಕುಡ್ಲದ ಸಿಒಒ ಕದ್ರಿ ನವನೀತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಗೌರವ ಅತಿಥಿ ಡಾ. ನಾರಾಯಣ ಕಾರ್ಕಟ್ಟೆ, ಸಿದ್ಧಾಂತ್ ಫೌಂಡೇಶನ್‌ನ ಟ್ರಸ್ಟಿ ಶ್ರೀ ರಾಮ್ ಪ್ರಭು, ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹಾಗೂ ನಮಿತಾ ಜಿ. ಭಟ್ ಅವರನ್ನು ಸಹ ಗೌರವಿಸಲಾಯಿತು.
‘ಕೆಲವರು ಪ್ರಪಂಚದ ನಕ್ಷೆಯನ್ನೇ ಬದಲಾಯಿಸುತ್ತಾರೆ’
ಅಧ್ಯಕ್ಷೀಯ ಭಾಷಣ ಮಾಡಿದ ಸಿಎ ಗೋಪಾಲಕೃಷ್ಣ ಭಟ್ ಅವರು, ಪ್ರಪಂಚದಲ್ಲಿರುವವರಲ್ಲಿ ಕೆಲವರು ಮಾತ್ರ ಪ್ರಪಂಚದ ನಕ್ಷೆಯನ್ನೇ ಬದಲಾಯಿಸುವಂತಹ ಸಾಧನೆ ಮಾಡುತ್ತಾರೆ ಎಂದರು. ಒಬ್ಬ ಗೋಪಾಲ್ ಒಂದು ಸಂಸ್ಥೆಯನ್ನು ಕಟ್ಟಲು ಸಾಧ್ಯವಾದರೆ, ಇಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದಲ್ಲಿ ಸಾವಿರಾರು ಸಂಸ್ಥೆಗಳನ್ನು ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ತಮ್ಮ ಮಾವ ಕೇಶವ ಪ್ರಭು ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ತಾವು ಸೇವಾಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ತಮ್ಮ ತಂದೆ-ತಾಯಿ ಕೃಷಿಕರಾಗಿದ್ದರು. ಬಾಲ್ಯದಿಂದಲೇ ದೇಶದ ಬಗ್ಗೆ ಕಾಳಜಿ ಹೊಂದಿದ್ದಾಗಿ ತಿಳಿಸಿದರು. ತಮಗೆ ಶಿಕ್ಷಣ ನೀಡಿದ ಮುಕುಂದ್ ಮಾಸ್ಟರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದುದನ್ನು ಸ್ಮರಿಸಿ ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯ ಬೆಳವಣಿಗೆಯಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಪೋಷಕರು ನೀಡಿರುವ ಸಹಕಾರವನ್ನು ಸ್ಮರಿಸಿದ ಗೋಪಾಲಕೃಷ್ಣ ಭಟ್, ಮುಂದಿನ ದಿನಗಳಲ್ಲಿ ತ್ರಿಷಾ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತ್ರಿಷಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಯಶಸ್ವಿನಿ ಯಶ್‌ಪಾಲ್ ಹಾಗೂ ತ್ರಿಷಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಪ್ರಭಾ ಎಂ. ಉಪಸ್ಥಿತರಿದ್ದರು. ಪ್ರೊ. ಸುಪ್ರಭಾ ಎಂ. ವಂದಿಸಿದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತ್ರಿಷಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

