ಗ್ರಾಮೀಣ ಪುನಶ್ಚೇತನ ಮತ್ತುಸಬಲೀಕರಣದ ಭಾಗವಾಗಿ ಪಾಲ್ಗೊಂಡ ಆಟಗಾರರಿಗೆ ಕರ್ನಾಟಕ ಗೇರು ಉತ್ಪಾದಕರ ಸಂಘದಿಂದ 400 ಕಸಿ ಗೇರು ಸಸಿಗಳ ಪ್ರಾಯೋಜಕತ್ವ
18ನೇ ಆವೃತ್ತಿಯ ಈಶ ಗ್ರಾಮೋತ್ಸವ 2026ರ ಕರ್ನಾಟಕ ವಿಭಾಗೀಯ ಪಂದ್ಯಗಳು ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ನಡೆದಿದ್ದು, ಈ ಭಾಗದ 300ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಭಾಗವಹಿಸಿದ್ದರು. ಈಶ ಔಟ್‌ರೀಚ್ ಆಯೋಜಿಸಿದ್ದ ಈ ವಿಭಾಗೀಯ ಪಂದ್ಯಗಳಲ್ಲಿ 18 ಪುರುಷರ ವಾಲಿಬಾಲ್ ತಂಡಗಳು ಮತ್ತು 12 ಮಹಿಳೆಯರ ಥ್ರೋಬಾಲ್ ತಂಡಗಳು ಪಾಲ್ಗೊಂಡಿದ್ದವು. ರಾಷ್ಟ್ರೀಯ ಹಂತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಹಂಬಲವಿರುವ ತಂಡಗಳಿಗೆ ಈ ಪಂದ್ಯಾವಳಿಯು ಪ್ರಮುಖ ಅರ್ಹತಾ ಸುತ್ತಾಗಿತ್ತು.
ತೀವ್ರ ಪೈಪೋಟಿಯಿಂದ ಕೂಡಿದ ಸರಣಿ ಪಂದ್ಯಗಳ ನಂತರ ಪುರುಷರ ವಾಲಿಬಾಲ್ ಪಂದ್ಯಾವಳಿಯು ಮುಕ್ತಾಯಗೊಂಡಿದ್ದು, ಉತ್ತರಕನ್ನಡ ಜಿಲ್ಲೆ ಹಣೆಹಳ್ಳಿಯ ಮುರಕುಂದೇಶ್ವರ್ ಹಣ್ಣೆಹಳ್ಳಿ ತಂಡ ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಗ್ರಾಮದ ಅಂಜನಾದ್ರಿ ತಂಡ ಅದ್ಭುತ ಪ್ರದರ್ಶನದೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ದಕ್ಷಿಣ ಕನ್ನಡ ಜಿಲ್ಲೆ ಮುತುರು ಗ್ರಾಮದ ಮಹಾಲಿಂಗೇಶ್ವರ ಬೊಳಿಯ ತಂಡ ತೃತೀಯ ಸ್ಥಾನವನ್ನು ಕಾಯ್ದುಕೊಂಡರೆ, ಶಿವಮೊಗ್ಗ ಜಿಲ್ಲೆ ರೆಪ್ಪನಪೇಟೆಯ ಶ್ರೀ ಸಿದ್ದಿ ವಿನಾಯಕ ಟೀಮ್ ನಾಲ್ಕನೇ ಸ್ಥಾನ ಪಡೆಯಿತು.
ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆ ಬಡಗನ್ನೂರ್ ಗ್ರಾಮದ ಶ್ರೀ ಕೃಷ್ಣ ಪಟ್ಟೆ ತಂಡ ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಳಗಾವಿ ಜಿಲ್ಲೆ ಬಿ.ಬಾಗೇವಾಡಿಯ ರಾಣಿ ಚೆನ್ನಮ್ಮ ತಂಡ ದ್ವಿತೀಯ ಸ್ಥಾನ ಪಡೆಯಿತು, ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬಡಗನ್ನೂರ್ ನ ಶಾಸ್ತಾರ ಪಡುಮಲೆ ತಂಡ ಮತ್ತು ಧಾರ್ವಾಡ್ ಜಿಲ್ಲೆ ತಿರ್ಲಾಪುರ್ ನ ಶ್ರೀ ರಾಮ್ ತಂಡ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡವು.
2004ರಲ್ಲಿ ಪ್ರಾರಂಭವಾದ ಈಶ ಗ್ರಾಮೋತ್ಸವವು ಸಾಂಪ್ರದಾಯಿಕ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸಲು, ದೈಹಿಕ ಆರೋಗ್ಯವನ್ನು ಉತ್ತೇಜಿಸಲು, ಸಮುದಾಯಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಮತ್ತು ಕ್ರೀಡೆಯ ಶಕ್ತಿಯ ಮೂಲಕ ಗ್ರಾಮೀಣ ಭಾರತದ ಪ್ರಮುಖ ಸಾಮಾಜಿಕ ಸವಾಲುಗಳನ್ನು ಎದುರಿಸಲು ಈಶ ಔಟ್‌ರೀಚ್ ಹಮ್ಮಿಕೊಳ್ಳುವ ವಾರ್ಷಿಕ ಗ್ರಾಮೀಣ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬವಾಗಿದೆ.
ಮೂಡುಬಿದಿರೆ ಜೈನ ಮಠದ ಧಾರ್ಮಿಕ ಮುಖ್ಯಸ್ಥರಾದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ತುಳುಕೂಟದ ಪ್ರೆಸಿಡೆಂಟ್ ಆದ ಧನಕೀರ್ತಿ ಬಲಿಪ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಪಂದ್ಯಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ :
“ನಮ್ಮ ಕನ್ನಡದ ಮಣ್ಣಿನಲ್ಲಿ ಹುಟ್ಟಿದ ಅದೆಷ್ಟೋ ಜೀವಗಳು ಈ ರೀತಿಯ ಅಮರ ಸಂದೇಶವನ್ನ ನೀಡುವುದರಲ್ಲಿ ಸಹಸ್ರ ಸಹಸ್ರ ವರ್ಷಗಳಿಂದ ತತ್ಪರವಾಗಿವೆ. ನಮ್ಮ ಕನ್ನಡ ನಾಡು ಮಾತ್ರವಲ್ಲ, ಭಾರತದ ಪ್ರತಿಯೊಂದು ಕಣ ಕಣವೂ ಕೂಡ ಅತ್ಯಂತ ಶ್ರೇಷ್ಠವಾಗಿರುವುದು. ಜಗತ್ತೆಲ್ಲವೂ ಶಾಂತಿ, ಸುಭಿಕ್ಷೆ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ಅಲ್ಲಿ ಉತ್ಸಾಹ ಇರಬೇಕು. ಆ ಉತ್ಸಾಹದೊಟ್ಟಿಗೆ ವಿವೇಕವೂ ಮೈಗೂಡಿಕೊಳ್ಳಬೇಕು. ಅಂತಹ ಕೆಲಸವನ್ನ ಈಶ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವರವರು ಬಹಳ ಶ್ರೇಷ್ಠ ಮಟ್ಟದಲ್ಲಿ, ಇಡೀ ಜಗತ್ತಿನ ಮನುಕುಲವೇ ನಮ್ಮ ಕುಟುಂಬ ಅನ್ನುವ ರೀತಿಯಲ್ಲಿ ಸಮಾಜವನ್ನ ಒಂದುಗೂಡಿಸುವ ಕೆಲಸವನ್ನು, ಪ್ರಕೃತಿ ಮಾತೆಗೆ ನಮಿಸುವ ಕೆಲಸವನ್ನು, ನಿರಂತರ ಆಧುನಿಕ ಪ್ರಜ್ಞೆಯೊಂದಿಗೆ ಪರಂಪರೆಯ ಬೆಳಕಿನೊಂದಿಗೆ ಮುನ್ನಡೆಸುತ್ತಿರೋದು ನಮಗೆಲ್ಲರಿಗೂ ಸಂತಸ ನೀಡಿದೆ. ನಮ್ಮ ಜೊತೆಗಿರುವ ಡಾ. ಮೋಹನ್ ಆಳ್ವ ಬೇರೆ ಅಲ್ಲ, ಜಗ್ಗಿ ವಾಸುದೇವ್ ಬೇರೆ ಅಲ್ಲ. ಯಾಕೆಂದರೆ ನಾವು ಪ್ರೀತಿಸುವ ವ್ಯಕ್ತಿಗಳಲ್ಲಿ ಬಹಳ ಶ್ರೇಷ್ಠ ಮಟ್ಟದ ಅನೇಕ ವ್ಯಕ್ತಿಗಳಿದ್ದಾರೆ. ಅಂತವರಲ್ಲಿ ಡಾ. ಮೋಹನ್ ಆಳ್ವ ಅವರು ಕೂಡ ಒಬ್ಬರು ಅನ್ನೋದು ನಮಗೆ ಹೆಮ್ಮೆ ತರುವ ವಿಚಾರ. ಈಶ ಫೌಂಡೇಶನ್‌ನ ಜಗ್ಗಿ ವಾಸುದೇವರವರ ಮನೋಧರ್ಮ ಹೇಗಿದೆ, ಕಲ್ಪನೆ ಹೇಗಿದೆ, ಉತ್ಸಾಹ ಹೇಗಿದೆ, ಅದೇ ಭಾವನೆ ಇರುವವರು ಡಾ. ಮೋಹನ್ ಆಳ್ವ. ಈಶ ಫೌಂಡೇಶನ್‌ನ ಜಗ್ಗಿ ವಾಸುದೇವ್ ರವರು ಮಗುವಿನೊಂದಿಗೆ ಮಗುವಿನ ಹಾಗೆ ಇರುತ್ತಾರೆ, ಪ್ರಾಜ್ಞರೊಂದಿಗೆ ಪ್ರಾಜ್ಞರಾಗಿರುತ್ತಾರೆ. ಆಧುನಿಕ ಪ್ರಜ್ಞೆಯುಳ್ಳ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಅಷ್ಟೇ ತೀಕ್ಷ್ಣವಾದ ಮತ್ತು ಮಧುರವಾದ ಉತ್ತರಗಳನ್ನು ನೀಡುತ್ತಾ ನಮ್ಮ ಬದುಕಿನ ರೀತಿ ನೀತಿಗಳನ್ನು ಬಲಪಡಿಸುತ್ತಾ ಬೆಳೆದವರು, ಮಾಲ್ಗುಡಿ ಡೇಸ್ ನ ಕಥೆಯ ಹಾಗೆ ಬಹಳ ಸುಂದರವಾದ ರೋಚಕವಾದ ಕಥೆಯಿರುವಂತಹ ಈಶ ಫೌಂಡೇಶನ್‌ನ ಸದ್ಗುರು” ಎಂದು ಮಾತನಾಡಿದರು.
ಗ್ರಾಮೀಣ ಪುನಶ್ಚೇತನ ಮತ್ತು ಸಬಲೀಕರಣದ ಈ ಬೃಹತ್ ಪ್ರಯತ್ನದ ಭಾಗವಾಗಿ, ಕರ್ನಾಟಕ ಗೇರು ಉತ್ಪಾದಕರ ಸಂಘವು ಭಾಗವಹಿಸಿದ ಎಲ್ಲಾ ಆಟಗಾರರಿಗೆ 400 ಕಸಿ ಗೇರು ಸಸಿಗಳನ್ನು ಪ್ರಾಯೋಜಿಸಿತು. ಈ ಉಪಕ್ರಮವು ಗ್ರಾಮೀಣ ಸಬಲೀಕರಣದ ಮನೋಭಾವವನ್ನು ಕ್ರೀಡಾಂಗಣದಾಚೆಗೂ ವಿಸ್ತರಿಸಿ, ಸುಸ್ಥಿರ ಜೀವನೋಪಾಯ ಮತ್ತು ಜನರ ಯೋಗಕ್ಷೇಮವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.
ಈ ವರ್ಷದ 18ನೇ ಆವೃತ್ತಿಯು ಗ್ರಾಮೋತ್ಸವದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಸ್ತರಣೆಯಾಗಿದ್ದು, 10 ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಿದೆ. 40,000ಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಿದ್ದು, ಅಂದಾಜು 7,000 ತಂಡಗಳ ಮೂಲಕ ಸುಮಾರು 15,000 ಮಹಿಳಾ ಆಟಗಾರರು ಸೇರಿದಂತೆ 80,000ಕ್ಕೂ ಹೆಚ್ಚು ಆಟಗಾರರನ್ನು ಒಳಗೊಂಡಿದೆ. ಮೊದಲ ಬಾರಿಗೆ, ಈ ಹಬ್ಬವು ತನ್ನ ಸಾಂಪ್ರದಾಯಿಕ ದಕ್ಷಿಣ ಭಾರತದ ಗಡಿಯಿಂದ ಹೊರತಾಗಿ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿಗಳ ಜೊತೆಗೆ ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರಗಳಿಗೂ ವಿಸ್ತರಿಸಿದೆ.
ಜನರು ಮತ್ತು ಸಮುದಾಯಗಳನ್ನು ರೂಪಿಸುವಲ್ಲಿ ಕ್ರೀಡೆಯ ಆಳವಾದ ಪಾತ್ರದ ಕುರಿತು ಮಾತನಾಡುತ್ತಾ ಸದ್ಗುರುಗಳು:
“ಜೀವಿಸಲು ಅತ್ಯಂತ ಜವಾಬ್ದಾರಿಯುತ ಮಾರ್ಗವೆಂದರೆ ಜೀವನದೊಂದಿಗೆ ಸದಾ ಉಲ್ಲಾಸದಿಂದ ಇರುವುದು. ಜೋಲು ಮುಖ ಮಾಡಿಕೊಂಡು ಬದುಕುವುದು ಅತ್ಯಂತ ಬೇಜವಾಬ್ದಾರಿತನ. ಲವಲವಿಕೆಯಿಂದ ಇರುವುದು ಎಂದರೆ ಜೀವನದೊಂದಿಗೆ ಅತ್ಯಂತ ಜವಾಬ್ದಾರಿಯುತವಾದ ಮತ್ತು ಸ್ಪಂದಿಸುವ ಗುಣ ಹೊಂದಿರುವುದು ಎಂದರ್ಥ. ನೀವು ಲವಲವಿಕೆಯಿಂದ ಇದ್ದಾಗ ಮಾತ್ರ ಎಲ್ಲದರ ಕಡೆಗೂ ಗಮನ ಹರಿಸಲು ಸಾಧ್ಯ. ನೀವು ಲವಲವಿಕೆಯಿಂದ ಇದ್ದರೆ ಮಾತ್ರ ಜಗತ್ತಿನ ಎಲ್ಲದಕ್ಕೂ ನಿಜವಾಗಿಯೂ ಸ್ಪಂದಿಸಬಹುದು, ಇಲ್ಲದಿದ್ದರೆ ಸಾಧ್ಯವಿಲ್ಲ – ಅದರ ಹೊರೆಯೇ ನಿಮ್ಮನ್ನು ಮುಗಿಸಿಬಿಡುತ್ತದೆ.” ಎಂದು ಹೇಳಿದ್ದಾರೆ.
ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ ‘ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹ ಸಂಸ್ಥೆ’ ಎಂದು ಗುರುತಿಸಲ್ಪಟ್ಟಿರುವ ಈಶ ಗ್ರಾಮೋತ್ಸವವು ಕಳೆದ ಎರಡು ದಶಕಗಳಲ್ಲಿ 35,000ಕ್ಕೂ ಹೆಚ್ಚು ಗ್ರಾಮಗಳ 2.6 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಟಗಾರರನ್ನು ಒಳಗೊಂಡಿದೆ. ವೃತ್ತಿಪರ ಕ್ರೀಡಾಪಟುಗಳನ್ನು ಉದ್ದೇಶಪೂರ್ವಕವಾಗಿ ಹೊರತುಪಡಿಸುವ ಮೂಲಕ, ಈ ಪಂದ್ಯಾವಳಿಯು ಗ್ರಾಮೀಣ ಆಟಗಾರರಿಗೆ ವ್ಯವಸ್ಥಿತ ಸ್ಪರ್ಧೆಯನ್ನು ಅನುಭವಿಸಲು ಮತ್ತು ರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಅಪರೂಪದ ಅವಕಾಶವನ್ನು ಕಲ್ಪಿಸುತ್ತದೆ.
*ಈಶ ಔಟ್‌ರೀಚ್ ಕುರಿತು*: ಈಶ ಔಟ್‌ರೀಚ್ ಎಂಬುದು ಈಶ ಸಂಸ್ಥೆಯ ಸಾಮಾಜಿಕ ಉಪಕ್ರಮಗಳ ವಿಭಾಗವಾಗಿದ್ದು, ಗ್ರಾಮೀಣ ಪುನಶ್ಚೇತನ, ಶಿಕ್ಷಣ, ಪರಿಸರ ಸುಸ್ಥಿರತೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಮಾನವ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
