ಮಂಗಳೂರು : ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿರುವ ಖ್ಯಾತ ಲೇಖಕಿ ಹಾಗೂ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಅವರು 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1949ರ ಮಾರ್ಚ್ 14ರಂದು ಕಿನ್ನಿಗೋಳಿಯ ಎಳತ್ತೂರು ಗುತ್ತಿನಲ್ಲಿ ಜನಿಸಿದ ಇವರು 33ನೇ ವಯಸ್ಸಿನಲ್ಲಿ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರು. ‘ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ’, ‘ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’, ‘ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು’ ಸೇರಿದಂತೆ ಹಲವು ಮಹತ್ವದ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಇವರ ‘ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ’ ಕೃತಿಗೆ ಡಿ.ಲಿಟ್ ಗೌರವ ಸಂದಿದೆ.
ಕಥೆ, ಕಾದಂಬರಿ, ಪ್ರವಾಸ ಸಾಹಿತ್ಯ ಹಾಗೂ ತುಳು ಸಂಸ್ಕೃತಿಯ ಸಂಶೋಧನೆಯಲ್ಲಿ ವಿಶೇಷ ಸಾಧನೆ ಮಾಡಿರುವ ಇವರು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಬಹುಮಾನ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.
ತುಳುನಾಡಿನ ಆಚಾರ-ವಿಚಾರ, ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾಹಿತ್ಯದ ಮೂಲಕ ದಾಖಲಿಸುತ್ತಿರುವ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ತುಳು ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.

