ಮಂಗಳೂರು : ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆ ಹಾಗೂ ಸರ್ವೇ ನಡೆಸುವ ನೆಪದಲ್ಲಿ ಫಲಾನುಭವಿಗಳಿಂದ ಒಟಿಪಿ (OTP) ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪಡೆಯುತ್ತಿರುವ ನಕಲಿ ಜಾಲದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಈಗಾಗಲೇ ಬೆಂಗಳೂರು ಸೇರಿದಂತೆ ಹಲವು ಕಡೆ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಸಮೀಕ್ಷೆ ನಡೆಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ ಗೃಹಲಕ್ಷ್ಮಿ ಯೋಜನೆಯ ಯಾವುದೇ ಸಮೀಕ್ಷೆ ಅಥವಾ ಮರು ಪರಿಶೀಲನೆ ಕಾರ್ಯವನ್ನು ಸರ್ಕಾರ ಈವರೆಗೆ ಆರಂಭಿಸಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿಕೊಂಡು ಕೆಲವು ಅನಧಿಕೃತ ವ್ಯಕ್ತಿಗಳು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆ ಮಾಹಿತಿಗಳನ್ನು ಸಂಗ್ರಹಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಕೃತ ಸ್ಪಷ್ಟನೆ ನೀಡಿದ್ದು, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸದ್ಯ ಯಾವುದೇ ಮರು ಪರಿಶೀಲನೆ ಅಥವಾ ಸರ್ವೇ ಕಾರ್ಯ ಪ್ರಾರಂಭಿಸಿಲ್ಲ ಎಂದು ತಿಳಿಸಿದೆ.
ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶದಂತೆ ಅಧಿಕೃತ ಮರು ಪರಿಶೀಲನೆ ಆರಂಭವಾದಲ್ಲಿ ಫಲಾನುಭವಿಗಳ ಗುರುತನ್ನು ದೃಢೀಕರಿಸಲು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ದೃಢೀಕರಣ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ ಸರ್ವೇ ಹೆಸರಿನಲ್ಲಿ ಮನೆಗೆ ಬರುವ ಅಪರಿಚಿತ ವ್ಯಕ್ತಿಗಳಿಗೆ ಒಟಿಪಿ, ಬ್ಯಾಂಕ್ ಖಾತೆ ವಿವರ, ಎಟಿಎಂ ಮಾಹಿತಿ ಅಥವಾ ಇತರ ವೈಯಕ್ತಿಕ ಮಾಹಿತಿಗಳನ್ನು ನೀಡಬಾರದು. ಯಾವುದೇ ಅನುಮಾನಾಸ್ಪದ ಕರೆ ಅಥವಾ ಭೇಟಿಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಖಚಿತಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

