ಬೆಂಗಳೂರು : ತುಳುನಾಡಿನ ಜಾಲಾಟ, ಜನಪದ ನಲಿಕೆ, ಯಕ್ಷಗಾನ ಹಾಗೂ ಭಾರತೀಯ ಜ್ಞಾನ ಪರಂಪರೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಹತ್ವವನ್ನು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಕಲಾಸಕ್ತರಿಗೆ ಪರಿಚಯಿಸುವ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್ ಹಾಗೂ ತುಳುವೆರೆ ಚಾವಡಿ ತೆಂಕೈ, ಬೊಮ್ಮಸಂದ್ರ, ಬೆಂಗಳೂರು ಸಂಸ್ಥೆಗಳು ಜಂಟಿಯಾಗಿ “ತುಳುವೆರೆ ಜಾಲಾಟೊರ್ದ್ – ಯಕ್ಷಗಾನೊ ಮುಟ್ಟ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿವೆ.
ಈ ಕಾರ್ಯಗಾರವು 2026ರ ಜುಲೈ 11ರಂದು (ಶನಿವಾರ) ಬೆಳಿಗ್ಗೆ 11.00 ಗಂಟೆಯಿಂದ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ (CoE–IKS) ಹಾಗೂ ಸ್ಕೂಲ್ ಆಫ್ ಪರ್ಫಾರ್ಮಿಂಗ್, ವಿಸುವಲ್ ಅಂಡ್ ಕ್ರಿಯೇಟಿವ್ ಆರ್ಟ್ಸ್, ಅಲಯನ್ಸ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಕಾರ್ಯಗಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದು, ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪ್ರೀಸ್ಟ್ಲಿ ಶಾನ್ ಬೋಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಚಿನ್ನಪ್ಪ ಗೌಡ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಶಿವರಾಮ ಶೆಟ್ಟಿ ತಲ್ಲೂರು ಭಾಗವಹಿಸಲಿದ್ದಾರೆ. ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಭಾನುಮತಿ ಶೆಟ್ಟಿ ಮತ್ತು ತುಳುವೆರೆ ಚಾವಡಿ ತೆಂಕೈ, ಬೊಮ್ಮಸಂದ್ರ ಅಧ್ಯಕ್ಷರಾದ ಉಮೇಶ್ ಬಂಗೇರ ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮಧ್ಯಾಹ್ನ 2.30 ಗಂಟೆಯಿಂದ ನಡೆಯುವ ಕಾರ್ಯಾಗಾರದಲ್ಲಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಡಾ. ತಾರಾನಾಥ ಬಲ್ಯಾಯ ವರ್ಕಾಡಿ ಹಾಗೂ ದಾ. ನಾ. ಉಮ್ಮಣ್ಣ ಅವರು ತುಳು ಯಕ್ಷಗಾನದ ಇತಿಹಾಸ, ವಿಕಾಸ, ಸಂಗೀತ, ಅಭಿನಯ, ವೇಷಭೂಷಣ, ಜನಪದ ಪರಂಪರೆ ಹಾಗೂ ಭಾರತೀಯ ಜ್ಞಾನ ವ್ಯವಸ್ಥೆಯೊಂದಿಗೆ ಅದರ ಸಂಬಂಧದ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಕಾರ್ಯಗಾರದ ಅಂಗವಾಗಿ ತುಳು ಜಾಲಾಟ, ತುಳು ಯಕ್ಷಗಾನ, ತುಳು ಪಾಡ್ದನ, ತುಳು ಪೌರಾಣಿಕ, ಸಾಮಾಜಿಕ ಹಾಗೂ ಜನಪದೀಯ ಪ್ರಸಂಗಗಳು, ಸಂಧಿ, ಓರಲ್‌ನಿಂದ ಭಾಗವತಿಕೆ, ಭಾರತೀಯ ಜ್ಞಾನ ಪರಂಪರೆಗೆ ಯಕ್ಷಗಾನದ ಕೊಡುಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಯ್ಕೆಯಾದ ಸಂಶೋಧನಾ ಪ್ರಬಂಧಗಳ ಪ್ರಸ್ತುತಿ (ಶೋಕೇಸ್) ನಡೆಯಲಿದೆ.
ಸಂಜೆ 5.00 ಗಂಟೆಯಿಂದ “ಸಿರಿ ಕಿಷ್ಣೆ ಚಂದಪಾಲಿ” ತುಳು ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಪ್ರಶಾಂತ್ ರೈ ಪಂಜ (ಭಾಗವತರು), ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ (ಮದ್ದಳೆ), ವರುಣ್ ಹೆಬ್ಬಾರ್ (ಚೆಂಡೆ) ಹಾಗೂ ರಂಜಿತ್ ಬಲಿಪ (ಚಕ್ರತಾಳ) ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ “ಹಾಸ್ಯದರಸು” ಸುಂದರ ಬಂಗಾಡಿ, “ಕಲಾಸವ್ಯಸಾಚಿ” ಪ್ರಶಾಂತ್ ಸಿ.ಕೆ., ಅಕ್ಷಯ್ ಮಾರ್ನಾಡ್, ಭುವನ್ ಶೆಟ್ಟಿ ಹಾಗೂ ಶಶಿಧರ್ ಬಾಚಕೆರೆ ಅಭಿನಯಿಸಲಿದ್ದು, ಜಿತೇಶ್ ಕುಡ್ಲ ವೇಷಭೂಷಣದ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಈ ಕಾರ್ಯಗಾರದ ಸಂಯೋಜನೆಯನ್ನು ಡಾ. ರಾಜೇಶ್ ಕೃಷ್ಣ ಆಳ್ವ (ನಿರ್ದೇಶಕರು, ತುಳುವರ್ಲ್ಡ್ ಫೌಂಡೇಶನ್), ಡಾ. ಎ. ಎಂ. ಶ್ರೀಧರನ್ (ನಿರ್ದೇಶಕರು, CoE–IKS, ಅಲಯನ್ಸ್ ವಿಶ್ವವಿದ್ಯಾಲಯ), ಡಾ. ಶ್ರುತಿ ಚಂದ್ರಶೇಖರ್ (ವಿಭಾಗ ಮುಖ್ಯಸ್ಥರು, ಸ್ಕೂಲ್ ಆಫ್ ಪರ್ಫಾರ್ಮಿಂಗ್, ವಿಸುವಲ್ ಅಂಡ್ ಕ್ರಿಯೇಟಿವ್ ಆರ್ಟ್ಸ್), ವಸಂತ ರೈ (ಪ್ರಧಾನ ಕಾರ್ಯದರ್ಶಿ, ತುಳುವರ್ಲ್ಡ್ ಫೌಂಡೇಶನ್), ಉಮೇಶ್ ಬಂಗೇರ (ಅಧ್ಯಕ್ಷರು, ತುಳುವೆರೆ ಚಾವಡಿ ತೆಂಕೈ) ಹಾಗೂ ವಿನೋದ್ ಕುಮಾರ್ (ಖಜಾಂಚಿ, ತುಳುವೆರೆ ಚಾವಡಿ ತೆಂಕೈ) ವಹಿಸಿಕೊಂಡಿದ್ದಾರೆ.
ಯಕ್ಷಗಾನ, ತುಳು ಭಾಷೆ, ಜನಪದ ಸಂಸ್ಕೃತಿ ಹಾಗೂ ಭಾರತೀಯ ಜ್ಞಾನ ಪರಂಪರೆಯ ಕುರಿತು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು, ಕಲಾವಿದರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.

