ಮಂಗಳೂರು: ತುಳು ಭಾಷೆ, ಸಂಸ್ಕೃತಿ ಹಾಗೂ ನಾಡಾಭಿಮಾನವನ್ನು ಬಲಪಡಿಸುವ ಉದ್ದೇಶದಿಂದ ಜುಲೈ 28 (ಆಟಿ 12)ರಂದು **”ತುಳು ನಾಡಗೀತೆ ದಿನ”**ವನ್ನು ರಾಜ್ಯ ಹಾಗೂ ವಿಶ್ವದಾದ್ಯಂತ ಅರ್ಥಪೂರ್ಣವಾಗಿ ಆಚರಿಸುವಂತೆ ತುಳುವ ಮಹಾಸಭೆ ಹಾಗೂ ವಿವಿಧ ತುಳು ಸಂಘಟನೆಗಳಿಗೆ ಕರೆ ನೀಡಲಾಗಿದೆ.
“ಜಯ ಜಯ ಜಯ ತುಳುವ ಸೀಮೆದ ಅಪ್ಪೆ ನಾಡ್” ಎಂಬ ತುಳು ನಾಡಗೀತೆ ಕೇವಲ ಒಂದು ಹಾಡಲ್ಲ; ಅದು ತುಳುನಾಡಿನ ಭಾಷೆ, ಸಂಸ್ಕೃತಿ, ಪರಂಪರೆ, ಆತ್ಮಗೌರವ ಮತ್ತು ಐಕ್ಯತೆಯ ಪ್ರತೀಕವಾಗಿದೆ. 1899ರಲ್ಲಿ ಕವಿ ಮೋನಪ್ಪ ತಿಂಗಳಾಯ ಅವರು ರಚಿಸಿದ ಈ ನಾಡಗೀತೆ 125 ವರ್ಷಗಳ ಐತಿಹಾಸಿಕ ಪಯಣವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ವಿಶೇಷ ಆಚರಣೆಗೆ ಆಹ್ವಾನ ನೀಡಲಾಗಿದೆ.
ಜುಲೈ 28ರಂದು ತುಳು ಸಂಘ-ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು, ದೇವಸ್ಥಾನಗಳು, ಸಭಾಭವನಗಳು ಹಾಗೂ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತುಳು ನಾಡಗೀತೆಯನ್ನು ಸಮೂಹವಾಗಿ ಹಾಡಿ, ಅದರ ಇತಿಹಾಸ ಹಾಗೂ ಮಹತ್ವವನ್ನು ಯುವಜನತೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವಂತೆ ಮನವಿ ಮಾಡಲಾಗಿದೆ.
ತುಳುನಾಡಿನ ಸಂಸ್ಕೃತಿ ಮತ್ತು ನಾಡಾಭಿಮಾನವನ್ನು ವಿಶ್ವದಾದ್ಯಂತ ಮೊಳಗಿಸುವ ಉದ್ದೇಶದಿಂದ ಎಲ್ಲ ತುಳು ಸಂಘಟನೆಗಳು, ಕಾರ್ಯಕರ್ತರು ಹಾಗೂ ತುಳು ಅಭಿಮಾನಿಗಳು ಈ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ತುಳುವ ಮಹಾಸಭೆ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಡಿ ಹಾಗೂ ತುಳುವರ್ಲ್ಡ್ ಫೌಂಡೇಶನ್‌ನ ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ ಜಂಟಿಯಾಗಿ ಮನವಿ ಮಾಡಿದ್ದಾರೆ.

