ಯುವಕನಿಗೆ ದೈಹಿಕ ಹಿಂಸೆ ನೀಡಿದ ಆರೋಪ : ಇಬ್ಬರ ಬಂಧನ

0
40

ಯುವಕನೊಬ್ಬನ ಇಚ್ಛೆಗೆ ವಿರುದ್ಧವಾಗಿ ಆತನ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ ಹಾಗೂ ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಚಿತ್ರದುರ್ಗ ನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಚಿತ್ರದುರ್ಗದ ಬುದ್ಧನಗರ ನಿವಾಸಿಗಳಾದ ಅನುಷ್ಕಾ ಹಾಗೂ ನಳಿನಾ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಚಳ್ಳಕೆರೆ ಗೇಟ್ ಬಳಿ ಸುತ್ತಾಡುತ್ತಿದ್ದ ವೇಳೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಚಿತ್ರದುರ್ಗದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ 25 ವರ್ಷದ ಯುವಕನಿಗೆ ಹೂವು ನೀಡುವ ಸಂದರ್ಭದಲ್ಲಿ ಇಬ್ಬರು ಆರೋಪಿಗಳ ಪರಿಚಯವಾಗಿತ್ತು ಎನ್ನಲಾಗಿದೆ. ಬಳಿಕ ಯುವಕನೊಂದಿಗಿನ ಪರಿಚಯ ಹಾಗೂ ಆತ್ಮೀಯತೆಯನ್ನು ದುರುಪಯೋಗಪಡಿಸಿಕೊಂಡು, ಸೆಪ್ಟೆಂಬರ್ 1ರಂದು ಆತನ ಇಚ್ಛೆಗೆ ವಿರುದ್ಧವಾಗಿ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪ ಕೇಳಿಬಂದಿದೆ.

ಇದಲ್ಲದೆ, ಯುವಕನ ತೊಡೆಗಳ ಮೇಲೆ ಬಿಸಿನೀರು ಹಾಗೂ ಕೆಂಡದಿಂದ ಸುಟ್ಟು ದೈಹಿಕ ಹಿಂಸೆ ನೀಡಿದ ಆರೋಪವೂ ಕೇಳಿಬಂದಿದೆ. ಸದ್ಯ ಯುವಕ ತನ್ನ ಸ್ವಗ್ರಾಮದಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ಯುವಕನ ತಂದೆ ಅಕ್ಟೋಬರ್ 9ರಂದು ಪರಶುರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಪ್ರಕರಣದ ತನಿಖೆ ಮುಂದುವರಿಸಿದ ಚಿತ್ರದುರ್ಗ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವಕನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ ಸಂದರ್ಭ, ಅದರ ಹಿಂದಿನ ಉದ್ದೇಶ ಹಾಗೂ ದೈಹಿಕ ಹಿಂಸೆಯ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.