ಕಟ್ಟಡದಿಂದ ಆಯತಪ್ಪಿ ಬಿದ್ದ ಇಬ್ಬರು ವಲಸೆ ಕಾರ್ಮಿಕರು

0
42

ಇಬ್ಬರಿಗೆ ಗಾಯ

ಉಳ್ಳಾಲ : ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರಿಬ್ಬರು ಕೆಳಗಡೆ ಬಿದ್ದು ಗಾಯಗೊಂಡ ಘಟನೆ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದ್ದು, ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ.

ಉಚ್ಚಿಲ ಅಜ್ಜಿನಡ್ಕ ಎಂಬಲ್ಲಿ ಹೋಲ್ ಸೇಲ್ ಬೇಕರಿ ಖಾದ್ಯಗಳನ್ನು ತಯಾರಿಸುವ ತಮಿಳುನಾಡು ಮೂಲದ ವಿಜಿ ಸ್ವೀಟ್ಸ್ ಮಾಲಕ ಉದಯ ಕುಮಾ‌ರ್ ಅವರ ಮಾಲಕತ್ವದ ಬೀರಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ದೆಹಲಿ ಮೂಲದ ಶಾಕೀರ್ (32) ಹಾಗೂ ಹೈದರ್(33) ಕಟ್ಟಡದಿಂದ ಬಿದ್ದು ಗಾಯಗೊಂಡ ವಲಸೆ ಕಾರ್ಮಿಕರಾಗಿದ್ದಾರೆ.

ಐದು ಮಹಡಿಯ ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಶಾಕೀರ್ ಹಾಗೂ ಹೈದ‌ರ್ ಅವರು ಆಕಸ್ಮಿಕವಾಗಿ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರು ಕಾರ್ಮಿಕರನ್ನ ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಶಾಕೀರ್ ಸ್ಥಿತಿ ಗಂಭೀರವಾಗಿದ್ದು ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.