ಒಬ್ಬ ವ್ಯಕ್ತಿಗೆ ಎರಡು ಹುದ್ದೆ? ತನಿಖೆಗೆ ಆಗ್ರಹಿಸಿ ದೂರು ಸಲ್ಲಿಕೆ

0
14

ಕುಂದಾಪುರ : ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಪ್ರತ್ಯೇಕ ಇಲಾಖೆಗಳ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಗಣಪತಿ ಪೂಜಾರಿ ತೊಂಬಟ್ಟು ಅವರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ದೂರಿನ ಪ್ರಕಾರ, ಸಂಬಂಧಪಟ್ಟ ವ್ಯಕ್ತಿಯು ಕುಂದಾಪುರ ತಾಲೂಕು ಪಂಚಾಯಿತಿಯ ಅಂಗವಿಕಲರ ಇಲಾಖೆಯಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂಆರ್‌ಡಬ್ಲ್ಯೂ) ಆಗಿ 2008ರಿಂದ ನಿಯೋಜನೆಗೊಂಡಿದ್ದಾರೆ. ಇದರ ಜತೆಗೆ 1996ರಿಂದ ಬೈಂದೂರು ಮೆಸ್ಕಾಂ ವಿಭಾಗದಲ್ಲಿ ಹೊರಗುತ್ತಿಗೆ ನೌಕರನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಒಬ್ಬ ವ್ಯಕ್ತಿ ಎರಡು ಪ್ರತ್ಯೇಕ ಇಲಾಖೆಗಳ ಅಡಿಯಲ್ಲಿ ಏಕಕಾಲದಲ್ಲಿ ಹೇಗೆ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂಬ ಪ್ರಶ್ನೆಯನ್ನು ಮುಂದಿಟ್ಟಿರುವ ದೂರುದಾರರು, ಈ ನೇಮಕಾತಿ ಹಾಗೂ ಕರ್ತವ್ಯ ನಿರ್ವಹಣೆಯ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.