ಸಾರ್ವಜನಿಕ ಶೌಚಾಲಯದ ಬಳಿ ಕುಸಿದುಬಿದ್ದು ಅಪರಿಚಿತ ವೃದ್ಧ ಸಾವು

0
7

ಉಡುಪಿ : ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಶೌಚಾಲಯದ ಸಮೀಪ ಕುಸಿದುಬಿದ್ದು ಅಪರಿಚಿತ ವೃದ್ಧರೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ವೃದ್ಧರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಶೇಖರ್ ಶೆಟ್ಟಿ ಎಂಬವರು ತಕ್ಷಣ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಒಳಕಾಡು ಅವರು ವೃದ್ಧರನ್ನು ಆಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ವೃದ್ಧರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಈ ಕುರಿತು ನಿತ್ಯಾನಂದ ಒಳಕಾಡು ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.

ಮೃತ ವೃದ್ಧರ ಹೆಸರು ಹಾಗೂ ವಿಳಾಸ ತಿಳಿದುಬಂದಿಲ್ಲ. ಅವರು ವಲಸೆ ಕಾರ್ಮಿಕರಾಗಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.