ಉಡುಪಿ : ಮುಖಕ್ಕೆ ಬೈಕ್ ಹೆಡ್‌ಲೈಟ್ ಹಾಕಿ ಚಿನ್ನದ ಸರ ದೋಚಿದ ಖದೀಮರು!

0
132

ಉಡುಪಿ: ನಗರದ ಅಜ್ಜರಕಾಡು ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರ ಗಮನ ಬೇರೆಡೆ ಸೆಳೆದು, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಲವಂತವಾಗಿ ಕಸಿದುಕೊಂಡು ಪರಾರಿಯಾದ ಘಟನೆ ನ.11ರಂದು ಸಂಜೆ ನಡೆದಿದೆ.

ಅಜ್ಜರಕಾಡು ನಿವಾಸಿ ಗೀತಾ ನಂಬಿಯಾರ್ ಅವರು ಚಿನ್ನದ ಸರ ಕಳೆದುಕೊಂಡವರು. ನ.11ರಂದು ಉಡುಪಿ ಪೇಟೆಗೆ ತೆರಳಿ ತರಕಾರಿ ಖರೀದಿಸಿ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಸಂಜೆ ಸುಮಾರು 6:30ರ ವೇಳೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದ 2ನೇ ಕ್ರಾಸ್ ಬಳಿಯಿಂದ ಉಡುಪಿ ಹೆರಿಟೇಜ್ ಪಕ್ಕದ ರಸ್ತೆಯಲ್ಲಿ ಘಟನೆ ನಡೆದಿದೆ.

ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊದಲು ಮುಂದೆ ಹೋಗಿ, ಸುಮಾರು 10 ಅಡಿ ದೂರದಲ್ಲಿ ಬೈಕ್ ತಿರುಗಿಸಿಕೊಂಡು ವಾಪಸ್ ಬಂದಿದ್ದಾರೆ. ಈ ವೇಳೆ ಬೈಕ್ ಸವಾರ ಹೆಡ್‌ಲೈಟ್ ಅನ್ನು ಗೀತಾ ಅವರ ಮುಖಕ್ಕೆ ನೇರವಾಗಿ ಹಾಕಿದ್ದಾನೆ. ಬೆಳಕಿನಿಂದ ಕಣ್ಣು ಕಾಣದಂತಾದಾಗ ಅವರು ಕೈಯನ್ನು ಕಣ್ಣಿಗೆ ಅಡ್ಡ ಹಿಡಿದು ನೋಡುತ್ತಿದ್ದ ಸಂದರ್ಭದಲ್ಲಿ ಹಿಂಬದಿ ಸವಾರ ಏಕಾಏಕಿ ಅವರ ಕುತ್ತಿಗೆಗೆ ಕೈ ಹಾಕಿ, ಸುಮಾರು ಒಂದೂವರೆ ಪವನ್ ತೂಕದ ಲಕ್ಷ್ಮಿ ಪೆಂಡೆಂಟ್ ಹೊಂದಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡಿದ್ದಾನೆ.

ಸರ ಕಸಿದುಕೊಳ್ಳುವ ಸಂದರ್ಭದಲ್ಲಿ ವೃದ್ಧೆಯನ್ನು ತಳ್ಳಿದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ಎಡಗೈ ಮೊಣಕೈಗೆ ಜಜ್ಜಿದ ರಕ್ತಗಾಯವಾಗಿದೆ. ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ ₹1.50 ಲಕ್ಷ ಎಂದು ತಿಳಿದುಬಂದಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 309(6) ಮತ್ತು 3(5)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.