ವೈವಿಧ್ಯತೆಯಲ್ಲಿ ಏಕತೆ, ಸಂಸ್ಕೃತಿಯಲ್ಲಿ ಸಾಮರಸ್ಯ – ಸುಜ್ಞಾನದಲ್ಲಿ ವಾರ್ಷಿಕೋತ್ಸವದ ವೈಭವ

0
39

ಬಾರ್ಕೂರು: “ವಸುದೈವ ಕುಟುಂಬಕಮ್” – ಇಡೀ ಜಗತ್ತೇ ಒಂದು ಕುಟುಂಬ, ಪ್ರೀತಿಯೇ ಅದರ ಬಂಧ, ಮಾನವೀಯತೆಯೇ ಅದರ ಧರ್ಮ ಎಂಬ ಉದಾತ್ತ ಸಂದೇಶವನ್ನು ಸಾರುವ ಆಶಯದೊಂದಿಗೆ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ಬಾರ್ಕೂರು ಇದರ 2026–27ನೇ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವವು ನವೆಂಬರ್ 26ರಂದು ಕಾಲೇಜಿನ ಆವರಣದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅವರು ವಹಿಸಿದ್ದರು. ಡಾ. ರವಿಪ್ರಕಾಶ್ ವೈ ನಿರ್ದೇಶಕರು , ಶೈಕ್ಷಣಿಕ ವಿಭಾಗ ಎಂ ಐ ಟಿ ಮಣಿಪಾಲ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸುಜ್ಞಾನ ಎಜುಕೇಷನಲ್ ಟ್ರಸ್ಟ್‌ನ ಖಜಾಂಚಿಗಳಾದ ಶ್ರೀ ಭರತ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ಅವರು ಉಪಸ್ಥಿತರಿದ್ದರು.

ಪೂರ್ಣಕುಂಭ ಸ್ವಾಗತ ಹಾಗೂ ಚೆಂಡೆಯ ನಾದದೊಂದಿಗೆ ಅತಿಥಿಗಳನ್ನು ವೇದಿಕೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾದ ಡಾ. ರವಿಪ್ರಕಾಶ್ ವೈ. ಅವರು ತಮ್ಮ ಸ್ಫೂರ್ತಿದಾಯಕ ಸಂದೇಶದಲ್ಲಿ, “ಸಕಾರಾತ್ಮಕ ಚಿಂತನೆಯೇ ಯಶಸ್ಸಿನ ಮೊದಲ ಹೆಜ್ಜೆ. ದೇವರು ಜೀವನದಲ್ಲಿ ಹಲವು ಬಾಗಿಲುಗಳನ್ನು ತೆರೆಯುತ್ತಾನೆ; ಅವುಗಳಲ್ಲಿ ಸರಿಯಾದದ್ದನ್ನು ಆಯ್ಕೆ ಮಾಡುವ ಜಾಣ್ಮೆ ನಮ್ಮದಾಗಿರಲಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ರಮೇಶ್ ಶೆಟ್ಟಿಯವರು, ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದರೊಂದಿಗೆ ಸಹಬಾಳ್ವೆ, ಪರಸ್ಪರ ಗೌರವ ಹಾಗೂ ಸಾಮರಸ್ಯದ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.

ಸುಜ್ಞಾನ ಎಜುಕೇಷನಲ್ ಟ್ರಸ್ಟ್‌ನ ಖಜಾಂಚಿಗಳಾದ ಭರತ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ದೊರೆಯುವ ಪ್ರತಿಯೊಂದು ವೇದಿಕೆಯೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಸಿಗುವ ಅಮೂಲ್ಯ ಅವಕಾಶವಾಗಿದ್ದು, ಅದನ್ನು ಆತ್ಮವಿಶ್ವಾಸದಿಂದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಆಚಾರ್ಯ ಅವರು ಕಾಲೇಜಿನ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಿವಿಧ ಚಟುವಟಿಕೆಗಳ ಸಾಧನೆಗಳನ್ನು ಒಳಗೊಂಡ ವಾರ್ಷಿಕ ವರದಿಯನ್ನು ವಾಚಿಸಿದರು.

ಸಂಸ್ಕೃತಿಗಳ ಸಂಗಮ – ಕಲಾ ವೈಭವದ ಅನಾವರಣ

ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವು ವೈವಿಧ್ಯಮಯ ಕಲಾಪ್ರಕಾರಗಳ ಅದ್ಭುತ ಸಂಗಮವಾಗಿ ಮೂಡಿಬಂದಿತು. “ವಸುದೈವ ಕುಟುಂಬಕಮ್” ಎಂಬ ಆಶಯಕ್ಕೆ ಜೀವ ತುಂಬುವಂತೆ ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿ, ಸಂಪ್ರದಾಯ, ವೇಷಭೂಷಣ ಹಾಗೂ ಜನಜೀವನವನ್ನು ಪ್ರತಿಬಿಂಬಿಸುವ ನೃತ್ಯರೂಪಕಗಳು ಮತ್ತು ಏಕಪಾತ್ರಾಭಿನಯಗಳು ಪ್ರೇಕ್ಷಕರ ಮನಸೂರೆಗೊಂಡವು.

ಜಾನಪದ ಸೊಗಡಿನ ಹುಲಿಕುಣಿತವು ಕರಾವಳಿಯ ಜನಪದ ಪರಂಪರೆಯ ಸೊಬಗನ್ನು ಅನಾವರಣಗೊಳಿಸಿದರೆ, ಕರಾವಳಿಯ ಗಂಡುಕಲೆ ಯಕ್ಷಗಾನವು ತನ್ನ ರಂಗವೈಭವದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ವಿಶೇಷವಾಗಿ ಯಕ್ಷಗಾನದ ‘ಕಂಸವಧೆ’ ಪ್ರಸಂಗವು ಪೌರಾಣಿಕ ಕಥಾನಕದ ವೀರರಸ, ಭಕ್ತಿಭಾವ ಹಾಗೂ ಅಭಿನಯ ವೈಖರಿಯನ್ನು ಸಮರ್ಥವಾಗಿ ಬಿಂಬಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಭಾರತದ ವಿವಿಧ ರಾಜ್ಯಗಳ ನೃತ್ಯಶೈಲಿಗಳು, ಜಾನಪದ ಕಲೆಗಳು, ಏಕಪಾತ್ರಾಭಿನಯ ಹಾಗೂ ಯಕ್ಷಗಾನದ ಸೊಬಗು ಒಂದೇ ವೇದಿಕೆಯಲ್ಲಿ ಅನಾವರಣಗೊಂಡಾಗ, ಇಡೀ ಭಾರತವೇ ಸುಜ್ಞಾನದ ವೇದಿಕೆಯಲ್ಲಿ ಸಂಭ್ರಮಿಸುತ್ತಿರುವಂತೆ ಭಾಸವಾಯಿತು. ವಿದ್ಯಾರ್ಥಿಗಳ ಕಲಾತ್ಮಕ ಅಭಿವ್ಯಕ್ತಿ, ಪರಿಶ್ರಮ ಮತ್ತು ಸಮನ್ವಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದವು.

ಕಾರ್ಯಕ್ರಮವನ್ನು ಉಪನ್ಯಾಸಕಿ ತನುಜಾ ಉಪಾಧ್ಯ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಉಪನ್ಯಾಸಕಿ ಸೌಮ್ಯ ಕೊಠಾರಿ ಅವರು ಸ್ವಾಗತಿಸಿದರು ಹಾಗೂ ಉಪನ್ಯಾಸಕಿ ಅನುಪಮ ಶೆಟ್ಟಿ ಅವರು ವಂದಿಸಿದರು.

ಕಲೆಗಳು ಭಾಷೆಯ ಗಡಿಗಳನ್ನು ದಾಟುತ್ತವೆ; ಸಂಸ್ಕೃತಿಗಳು ಹೃದಯಗಳನ್ನು ಬೆಸೆಯುತ್ತವೆ. ರಾಜ್ಯಗಳು ಬೇರೆಯಾದರೂ ಭಾವನೆ ಒಂದೇ, ವೇಷಭೂಷಣಗಳು ವಿಭಿನ್ನವಾದರೂ ಮಾನವೀಯತೆಯ ಬೇರು ಒಂದೇ ಎಂಬ ಸುಂದರ ಸಂದೇಶವನ್ನು ಸಾರಿದ ಸುಜ್ಞಾನದ ಈ ವಾರ್ಷಿಕೋತ್ಸವವು ಕೇವಲ ಮನರಂಜನೆಯ ಕಾರ್ಯಕ್ರಮವಾಗದೆ, ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯ ಅನನ್ಯ ದರ್ಶನವಾಯಿತು