ಮುಡಿಪು: ಸಂಸ್ಕೃತಿ ಮತ್ತು ಜಾನಪದದ ಶ್ರೀಮಂತಿಕಯಲ್ಲಿ ತುಳು ಕನ್ನಡ, ತಮಿಳು, ಮಲಯಾಳಕ್ಕೆ ಸರಿಸಮಾನದ ಕೆಲವು ಕಡೆ ಸ್ವಲ್ಪ ಹೆಚ್ಚೇ ತೂಕವುಳ್ಳದ್ದೆಂದು ತೋರುತ್ತದೆ.ಲಿಪಿ ಮತ್ತು ಲಿಖಿತ ಸಾಹಿತ್ಯ ಪರಂಪರೆಯಲ್ಲಿ ಮಧ್ಯಕಾಲದ ಕೊಂಡಿ ಇಲ್ಲದಿರುವುದರಿಂದ ಸ್ವಲ್ಪ ಗೊಂದಲಗಳಿವೆ ನಿಜ. ಆದರೆ ತುಳುವರು ಈ ಬಗೆಗೆ ಕೀಳರಿಮೆ ಪಡಬೇಕಾಗಿಲ್ಲ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ ಬೆಳ್ಳೂರು ಹೇಳಿದರು.
ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಮಂಜುನಾಥೇಶ್ವರ ತುಳುಪೀಠದ ವತಿಯಿಂದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಬಿಎ ವಿವೇಕ ರೈ ವಿಚಾರ ವೇದಿಕೆಯಲ್ಲಿ ಪ್ರಚಾರೋಪನ್ಯಾಸ ಮಾಲಿಕೆಯಡಿ ‘ ತುಳು ಸಾಹಿತ್ಯ ಪರಂಪರೆ’ ಕುರಿತು ಉಪನ್ಯಾಸ ನೀಡಿದರು.
ಕನ್ನಡದಲ್ಲಿ ಭಾಷಿಕ ಅವಸ್ಥಾಂತರಗಳನ್ನು ಅರ್ಥಮಾಡಿಕೊಳ್ಳಲು ಪ್ರಾಚೀನ, ಮಧ್ಯಕಾಲೀನ, ಆಧುನಿಕ ರೂಪಗಳಿವೆ. ತುಳುವಿನಲ್ಲಿ ಮಧ್ಯಕಾಲೀನ ತುಳು ಸಾಹಿತ್ಯ ದೊರಕದೇ ಇರುವುದು ಒಂದು ಕೊರತೆ. ಆದರೆ ೧೩ ನೇ ಶತಮಾನದಿಂದಲೇ ತುಳುವಿನ ಲಿಖಿತ ಸಾಹಿತ್ಯ ಪರಂಪರೆಯಿದೆ.ಅದರ ಅರ್ಥವತ್ತಾದ ಓದು ಸಾಧ್ಯವಾಗಬೇಕು ಅಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ನಾಗಪ್ಪ ಗೌಡ ಮಾತನಾಡಿ ತುಳು ಸುಂದರ ಭಾಷೆ. ಯುವಜನತೆ ಇದನ್ನು ಬೆಳೆಸಬೇಕು ಎಂದರು. ತುಳು ಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಮಾತನಾಡಿ ತುಳು ಲಿಪಿ ಮತ್ತು ಪ್ರಾಚೀನ ಕೃತಿಗಳ ಕುರಿತು ಸಂಶೋಧನೆ ನಡೆದು ಮೂರು ದಶಕಗಳು ಕಳೆದರೂ ಇನ್ನೂ ತುಳುವಿಗೆ ಲಿಪಿಯಿಲ್ಲ ಎನ್ನುತ್ತಾರೆ. ಈ ಅವಜ್ಞೆ ಸಲ್ಲದು ಎಂದರು. ಡಾ.ಯಶುಕುಮಾರ್ ಉಪಸ್ಥಿತರಿದ್ದರು.
ತುಳುಪೀಠದ ಪ್ರಸಾದ್ ಅಂಚನ್ ನಿರೂಪಿಸಿದರು.

