ಬಡ ಮಕ್ಕಳ ಬದುಕಿಗೆ ಆಸರೆಯಾದ ‘ಉಯ್ಯಾಲೆ’

0
30

ಸಮಾಜಸೇವೆ ಮತ್ತು ಸಂಸ್ಕೃತಿ ಸಂರಕ್ಷಣೆಯ ಧ್ಯೇಯದೊಂದಿಗೆ ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿಯಲ್ಲಿ ‘ಉಯ್ಯಾಲೆ’ ಸೇವಾ ವಿಭಾಗಕ್ಕೆ ಚಾಲನೆ ನೀಡಿ, ಬಡ ಮಕ್ಕಳ ನೆರವಿಗೆ ಹೊಸ ಹೆಜ್ಜೆ ಇಟ್ಟಿತು.

ತಾಯಿ ಮಗುವನ್ನು ಉಯ್ಯಾಲೆಯಲ್ಲಿ ತೂಗುವಾಗ ಸಿಗುವ ನೆಮ್ಮದಿಯಂತೆ, ಬಡ ಮಕ್ಕಳ ಬದುಕಿನಲ್ಲಿ ಸಣ್ಣ ಸೇವೆಯೂ ಅಪಾರ ತೃಪ್ತಿ ನೀಡುತ್ತದೆ ಎಂದು ಆಮಂತ್ರಣ ಉಯ್ಯಾಲೆ ಸೇವಾ ವಿಭಾಗದ ಅಧ್ಯಕ್ಷೆ ಸೌಮ್ಯ ತಿಲಕ್ ಶೆಟ್ಟಿ ಹೇಳಿದರು.

ಅವರು ಅಳದಂಗಡಿ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆದ ಆಮಂತ್ರಣ ಸೇವಾ ಪ್ರತಿಷ್ಠಾನದ ‘ತುಳುಸಿಂಗಾರ’ ಹಾಗೂ ‘ಉಯ್ಯಾಲೆ’ ಸೇವಾ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧಾರ್ಮಿಕ ಮುಖಂಡ ಉರುವಾಲು ಕಿರಣ್ ಚಂದ್ರ ಡಿ. ಪುಷ್ಪಗಿರಿ ತುಳು ಭಾಷೆ-ಸಂಸ್ಕೃತಿಯ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಉಯ್ಯಾಲೆ ಸೇವಾ ವಿಭಾಗ ಉದ್ಘಾಟಿಸಿದ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಮಕ್ಕಳಿಗೆ ಪ್ರೀತಿ, ಕಾಳಜಿ ಮತ್ತು ಆಸರೆ ನೀಡುವುದು ಸಮಾಜದ ಹೊಣೆ ಎಂದು ಹೇಳಿದರು.

ಮೊದಲ ಸೇವಾ ಚಟುವಟಿಕೆಯಾಗಿ ಎಂಟು ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ನೆರವು ವಿತರಿಸಿ ಸಮಾಜಮುಖಿ ಕಾರ್ಯಗಳಿಗೆ ಸಹಕಾರ ನೀಡುವಂತೆ ಕರೆ ನೀಡಿದರು.

ಆಮಂತ್ರಣ ರಾಜ್ಯ ನಿರ್ದೇಶಕಿ ಉಮಾ ಸುನಿಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಚೆನ್ನೆಮಣೆ ಸ್ಪರ್ಧೆ, ತುಳುನಾಡಿನ ಸಂಸ್ಕೃತಿ ಕುರಿತ ಚಿತ್ರಕಲಾ ಸ್ಪರ್ಧೆ ಹಾಗೂ ಗ್ರಾಮೀಣ ಮಟ್ಟದ ಕಬಡ್ಡಿ ಪಂದ್ಯಾಟಗಳು ನಡೆದವು.

ಮಕ್ಕಳ ಭವಿಷ್ಯಕ್ಕೆ ಆಸರೆಯಾಗುವ ಸೇವಾ ಕಾರ್ಯಗಳು ಸಮಾಜದಲ್ಲಿ ಮಾನವೀಯತೆ, ಸಹಭಾಗಿತ್ವ ಮತ್ತು ಸಂಸ್ಕೃತಿ ಸಂರಕ್ಷಣೆಯ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.

ವರದಿ-ಮಂದಾರ ರಾಜೇಶ್