ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಅಂತರ ಕಾಲೇಜು ಭಾಷಣ ಸ್ಪರ್ಧೆ ಸಮಾರೋಪ

0
9

29 ಕಾಲೇಜುಗಳ 51 ವಿದ್ಯಾರ್ಥಿಗಳ ಭಾಗಿ; ತೇಜಸ್ವಿ ಗಾಂವ್ಕರ್‌ಗೆ ಪ್ರಥಮ ಬಹುಮಾನ

ಮೂಡುಬಿದಿರೆ : ಇಲ್ಲಿನ ಶ್ರೀ ಮಹಾವೀರ ಕಾಲೇಜಿನಲ್ಲಿ ಎಸ್.ಡಿ. ಸಾಮ್ರಾಜ್ಯ ಸ್ಮಾರಕ ಅಂತರ ಕಾಲೇಜು ಭಾಷಣ ಸ್ಪರ್ಧೆಯ ಸಮಾರೋಪ ಸಮಾರಂಭ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸ್ಪರ್ಧೆ ಎಂದರೆ ಕೇವಲ ಬಹುಮಾನ ಪಡೆಯುವುದಕ್ಕಾಗಿ ಮಾತ್ರವಲ್ಲ, ಅದು ಹೊಸ ಅನುಭವಗಳನ್ನು ನೀಡುವುದರೊಂದಿಗೆ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ತಯಾರಿ ನಡೆಸಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಭಾಷಣ ಕಲೆಗೆ ಅಗತ್ಯವಾದ ಪೂರಕ ಅಂಶಗಳನ್ನು ಅರಿತುಕೊಂಡು, ಸರಿಯಾದ ಪೂರ್ವತಯಾರಿ ಮಾಡಿಕೊಂಡರೆ ಉತ್ತಮ ಭಾಷಣಕಾರರಾಗಿ ಮೂಡಿಬರಲು ಸಾಧ್ಯ. ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕ್‌ನ ಕೊಡೆಂಗಲ್ಲು ಶಾಖೆಯ ವ್ಯವಸ್ಥಾಪಕ ಗ್ರಹಾಂ ಮನೋಜ್ ಡಿಸೋಜಾ ಭಾಗವಹಿಸಿದ್ದರು. ತೀರ್ಪುಗಾರರಾಗಿ ಜೈನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮ್ ಪ್ರಸಾದ್, ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಸಾಣೂರು ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಸೀಮಾ ರೈ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿನಿ, ಯುವ ಲೇಖಕಿ ರಿಶೆಲ್ ಬ್ರೆಟ್ ನಿರ್ನಾಂಡೀಸ್ ಕಾರ್ಯನಿರ್ವಹಿಸಿದರು.

ಈ ಸ್ಪರ್ಧೆಯಲ್ಲಿ ಒಟ್ಟು 29 ಕಾಲೇಜುಗಳ 51 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿಯ ತೇಜಸ್ವಿ ಗಾಂವ್ಕರ್ ಪ್ರಥಮ ಬಹುಮಾನ ಪಡೆದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವಿನ ಸಾಕ್ಷಿ ಎಂ.ಕೆ. ದ್ವಿತೀಯ ಬಹುಮಾನ ಹಾಗೂ ಪೂರ್ಣಪ್ರಜ್ಞ ಕಾಲೇಜು, ಉಡುಪಿಯ ಯಶಸ್ವಿ ತೃತೀಯ ಬಹುಮಾನ ಗಳಿಸಿದರು.

ಸಮಾಧಾನಕರ ಬಹುಮಾನಗಳನ್ನು ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದ ಸಿಂಚನಾ ಕೆ.ಎಸ್., ಸಂತ ಫಿಲೋಮಿನಾ ಕಾಲೇಜು, ಪುತ್ತೂರಿನ ಲಿಖಿತಾ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವಿನ ಗಾಯನಾ ಬಿ.ಡಿ. ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮಿ, ವಿದ್ಯಾರ್ಥಿ ಮಾನವಿಕ ಸಂಘದ ಸಂಚಾಲಕಿ ಗೀತಾ ರಾಮಕೃಷ್ಣ ಹಾಗೂ ಮಾನವಿಕ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಮರಿಯಮ್ಮ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ನಮ್ರತಾ ಸ್ವಾಗತಿಸಿದರು. ಮರಿಯಮ್ಮ ವಂದಿಸಿದರು. ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಗೌರಿ ವಿಜೇತರ ಪಟ್ಟಿಯನ್ನು ವಾಚಿಸಿದರು.