ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದಿಂದ ಆಯೋಜನೆ; ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ
-ಮಂದಾರ ರಾಜೇಶ್
ಗುಂಡ್ಯಡ್ಕ : ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ (ರಿ.) ಗುಂಡ್ಯಡ್ಕ ಇದರ ವತಿಯಿಂದ ಸಮಾಜ ಬಾಂಧವರಿಗಾಗಿ ಪ್ರತಿವರ್ಷದಂತೆ ಈ ಬಾರಿಯೂ ವಿವಿಧ ಸ್ಪರ್ಧೆಗಳನ್ನು ನವೆಂಬರ್ 15ರಂದು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಗುಂಡ್ಯಡ್ಕದ ರುಕ್ಮಿಣೀ ಪಾಂಡುರಂಗ ಸಭಾಭವನದಲ್ಲಿ ಸ್ಪರ್ಧೆಗಳು ನಡೆಯಲಿವೆ. ಭಗವದ್ಗೀತೆ ಕಂಠಪಾಠ, ಚಿತ್ರಕಲೆ, ಕನ್ನಡ ಮತ್ತು ಮರಾಠಿ ಭಕ್ತಿಗೀತೆ, ರಂಗವಲ್ಲಿ, ಸಂಗೀತ ಕುರ್ಚಿ, ಹೂ ಕಟ್ಟುವಿಕೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ.
ಭಗವದ್ಗೀತೆ ಕಂಠಪಾಠ ಮತ್ತು ಚಿತ್ರಕಲಾ ಸ್ಪರ್ಧೆಗಳು ಸಬ್ ಜೂನಿಯರ್ ಹಾಗೂ ಜೂನಿಯರ್ ವಿಭಾಗಗಳಲ್ಲಿ ನಡೆಯಲಿದ್ದು, ಭಕ್ತಿಗೀತೆ, ರಂಗವಲ್ಲಿ ಮತ್ತು ಸಂಗೀತ ಕುರ್ಚಿ ಸ್ಪರ್ಧೆಗಳು ಮೂರು ವಿಭಾಗಗಳಲ್ಲಿ ನಡೆಯಲಿವೆ. ಹೂ ಕಟ್ಟುವಿಕೆ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ.
ಸಬ್ ಜೂನಿಯರ್ ವಿಭಾಗದಲ್ಲಿ 4ನೇ ತರಗತಿವರೆಗಿನವರು, ಜೂನಿಯರ್ ವಿಭಾಗದಲ್ಲಿ 5ರಿಂದ 10ನೇ ತರಗತಿವರೆಗಿನವರು ಹಾಗೂ ಸೀನಿಯರ್ ವಿಭಾಗದಲ್ಲಿ 10ನೇ ತರಗತಿಗಿಂತ ಮೇಲ್ಪಟ್ಟವರು ಭಾಗವಹಿಸಬಹುದು.
ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ವಿಭಾಗದವರು ಮೊದಲ ಅಧ್ಯಾಯದ 31ರಿಂದ 35ನೇ ಶ್ಲೋಕಗಳನ್ನು ಹಾಗೂ ಜೂನಿಯರ್ ವಿಭಾಗದವರು ಎರಡನೇ ಅಧ್ಯಾಯದ 21ರಿಂದ 30ನೇ ಶ್ಲೋಕಗಳನ್ನು ಪಠಿಸಬೇಕು.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಎಳೆಯ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ಸಂಘದ ಅಧ್ಯಕ್ಷ ಶ್ರೀ ರಾಮಚಂದ್ರ ಭಟ್ ನಾಟೇಕರ್ ಹಾಗೂ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಭಟ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು (ಮೊ. 9972317575) ಹಾಗೂ ಕಾರ್ಯದರ್ಶಿ (ಮೊ. 9449366524) ಅವರನ್ನು ಸಂಪರ್ಕಿಸಬಹುದು.
