ಶಿರ್ವದಲ್ಲಿ ನ. 22ರಂದು ಸೂರ್ಯ-ಚಂದ್ರ ಜೋಡುಕರೆ ಕಂಬಳ

0
53

ಶಿರ್ವ : ಶತಮಾನಗಳ ಇತಿಹಾಸ ಹೊಂದಿರುವ ಶಿರ್ವ ನಡಿಬೆಟ್ಟು ಕಂಬಳವು ತುಳುನಾಡಿನ ಧಾರ್ಮಿಕ ಆಚರಣೆಗಳು ಹಾಗೂ ಸಾಂಪ್ರದಾಯಿಕ ಪರಂಪರೆಯ ಹಿನ್ನೆಲೆಯನ್ನು ಹೊಂದಿದೆ. ಸಂಪ್ರದಾಯದ ಹಾದಿಯಲ್ಲಿಯೇ ಸಾಗಿಬರುತ್ತಿರುವ ಈ ಕಂಬಳವು ಆಧುನಿಕ ಜೋಡುಕರೆ ಕಂಬಳದ ವೈಭವವನ್ನೂ ಮೈಗೂಡಿಸಿಕೊಂಡಿದೆ. 31ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳವು ನವೆಂಬರ್ 22ರಂದು ಬೆಳಗ್ಗೆ 10ರಿಂದ ಸಂಜೆವರೆಗೆ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಲಿದೆ.

ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪ್ರಫುಲ್ಲ ಶೆಟ್ಟಿ ಅವರು ಕಂಬಳವನ್ನು ಉದ್ಘಾಟಿಸಲಿದ್ದಾರೆ.

ಶಿರ್ವ ನಡಿಬೆಟ್ಟು ಯಜಮಾನ ದಾಮೋದರ ಚೌಟ ಅವರ ಮುಂದಾಳತ್ವದಲ್ಲಿ, ಕಂಬಳದ ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆ ಅವರು ಊರವರ ಸಹಕಾರದೊಂದಿಗೆ ಕಂಬಳವನ್ನು ಆಯೋಜಿಸುತ್ತಿದ್ದಾರೆ. ಕಂಬಳದ ಪ್ರಯುಕ್ತ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಸ್ಪರ್ಧೆಯಲ್ಲಿ ಹಗ್ಗ ಕಿರಿಯ ಮತ್ತು ಅತೀ ಕಿರಿಯ ವಿಭಾಗದ ಕೋಣಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಕಂಬಳದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳದ ವೈಭವವನ್ನು ಸಾರುವ ಈ ಕ್ರೀಡಾಕೂಟದಲ್ಲಿ ಕಂಬಳಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.