ವಿಶ್ವ ಗೀತಾ ಪರ್ಯಾಯ ಸ್ಪೆಷಲ್ : ಜ.8ರಂದು ಹೊನ್ನಿನ ಭಗವದ್ಗೀತಾ ಹೊತ್ತಗೆ ಲೋಕಾರ್ಪಣೆ

0
18

ಉಡುಪಿ : ವಿಶ್ವ ಗೀತಾ ಪರ್ಯಾಯ ಖ್ಯಾತಿಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಬಹುವಿಧ ಕಾರ್ಯಕ್ರಮಗಳಿಗೆ ಶಿಖರಪ್ರಾಯವಾಗಿ ದೆಹಲಿಯ ಶ್ರೀಕೃಷ್ಣ ಭಕ್ತರೋರ್ವರು ಸುಮಾರು 2 ಕೋ.ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ‘ಹೊನ್ನಿನ ಭಗವದ್ಗೀತಾ ಹೊತ್ತಗೆ’ ಜ. 8ರಂದು ಸಂಜೆ 5 ಗಂಟೆಗೆ ಶ್ರೀಕೃಷ್ಣ ಸನ್ನಿಧಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆ (ತಗಡು)ಯಲ್ಲಿ ಅಂದವಾಗಿ ಮುದ್ರಿಸಲಾಗಿದೆ.

ಹೊನ್ನಿನ ಭಗವದ್ಗೀತಾ ಹೊತ್ತಗೆಯನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಕೃಷ್ಣ ಸನ್ನಿಧಿಗೆ ತಂದು, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಗುವುದು.

ವಿಶ್ವಹಿಂದೂ ಪರಿಷತ್ ಪ್ರಮುಖರು ಹಾಗೂ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ವಿಶ್ವಸ್ಥ ಡಾ.ಅನಿಲ್ ಮಿಶ್ರಾ ಹಾಗೂ ಪಂಢರಾಪುರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಹನೀನಾಥ ಜ್ಞಾನೇಶ್ವರ ಮಹಾರಾಜ್ ಔಶೇಕರ್ ಹಾಗೂ ಆಳಂದ ಜ್ಞಾನೇಶ್ವರ ಮಹಾರಾಜ್ ಪೀಠದ ಪ್ರಧಾನ ಅರ್ಚಕ ಗಿರೀಶ್ ತುಕ್ರಿ ಅಭ್ಯಾಗತರಾಗಿ ಆಗಮಿಸುವರು ಎಂದು ಪರ್ಯಾಯ ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here