ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ 5 ರಿಂದ 9 ನೆಯ ತರಗತಿ ಕಲಿಯುವ ಕೊಂಕಣಿ ಮಕ್ಕಳಿಗಾಗಿ 3 ದಿವಸಗಳ ಉಚಿತ ಸನಿವಾಸಿ ರಂಗತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದ ಉದ್ಗಾಟನಾ ಸಮಾರಂಭವು ದಿ 18-04-2025 ರಂದು ಬೆಳಿಗ್ಗೆ 9.30 ಕ್ಕೆ ಮಾಸ್ಟರ್ ಅಂಕುಶ ಭಟ್ ಅವರು ಉದ್ಘಾಟಿಸಲಿರುವರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕೇಂದ್ರದ ಟ್ರಸ್ಟಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿರುವುದು.
ಈ ಕಾರ್ಯಾಗಾರದಲ್ಲಿ ಮಕ್ಕಳಿಗೆ ಅನೇಕ ರೀತಿಯ ರಂಗಚಟುವಟಿಕೆಗಳು, ಸಂಗೀತದ ಜೊತೆ ನಾಟಕ ದೃಶ್ಯ ಕಟ್ಟುವಿಕೆ, ಪಾತ್ರ ಪೋಷಣಾ ಕ್ರಮ, ರಂಗ ಅಭ್ಯಾಸ, ಹಾಗೂ ಸಂಗೀತ, ನೃತ್ಯ ಕಲಿಕೆ, ದೃಶ್ಯ ಸಂಭಾಷಣೆ, ಹಾವ ಭಾವ ಅಭ್ಯಾಸ, ಸಂಭಾಷಣೆ, ಪಾತ್ರ ಹೊಂದಾಣಿಕೆ ಅಭ್ಯಾಸ, ಸ್ವರಾಭ್ಯಾಸ, ಕೋಲಾಟ, ಭಜನೆ, ವ್ಯಾಯಾಮ, ಧ್ಯಾನ ಮೊದಲಾದ ಹಲವಾರು ವಿಷಯಗಳಲ್ಲಿ ತರಬೇತಿಯನ್ನು ನೀಡಲಿರುವರು.
ಸಾಧನಾ ಬಳಗ ತಂಡದ ಮುಖ್ಯಸ್ಠರಾದ ಹಾಗೂ ಕಾರ್ಯಾಗಾರದ ಸಂಚಾಲಕ ಪ್ರಕಾಶ ಶೆಣೈ, ಹೆಸರಾಂತ ಚಲನಚಿತ್ರ ನಿರ್ದೇಶಕ- ರಂಗ ನಿರ್ದೇಶಕ- ರಂಗಕೃತಿಕಾರ ಜಗನ್ ಪವಾರ, ನಾಟಕ ಮೇಕ ಅಪ್ ತರಬೇತುದಾರ ಅರುಣ್ ಪ್ರಕಾಶ ನಾಯಕ್, ರಂಗ ಸಂಗೀತ ನಿರ್ದೇಶಕಿ ಭಾವನಾ ವಿ ಪ್ರಭು, ರಂಗ ನೃತ್ಯ ನಿರ್ದೇಶಕಿ ವೃಂದಾ ನಾಯಕ, ಯೋಗ ತರಬೇತಿ ನಿರ್ದೇಶಕ ಎಮ್ ನಾಗೇಶ ಪ್ರಭು ಮತ್ತು ಕೊಂಕಣಿ ಸುಗಮ ಸಂಗೀತ ತರಬೇತುಗಾರ್ತಿ ಸುಚಿತ್ರಾ ಎಸ್ ಶೆಣೈ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು ತರಬೇತಿ ನೀಡಲಿರುವರು. ವಿಶ್ವ ಕೊಂಕಣಿ ಕೇಂದ್ರದೊಂದಿಗೆ ‘ವರ್ಧನಿ’ ಸಂಸ್ಥೆಯು ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.
ದಿ 20-04-2025 ರಂದು ಸಾಯಂಕಾಲ 3. 3೦ ಕ್ಕೆ ರಂಗತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗಲಿರುವುದು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹೆಸರಾಂತ ರಂಗ ನಾಟಕ ಕಲಾವಿದರಾದ ಎಚ್ ಸತೀಶ್ ನಾಯಕ ಭಾಗವಹಿಸಲಿರುವರು. ಈ ಸಂಧರ್ಭದಲ್ಲಿ ಮಕ್ಕಳ 3 ದಿವಸಗಳ ಅಭ್ಯಾಸದ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.