ದೇವಿ ಪಾತ್ರಿ, ದಾರು ಶಿಲ್ಪಿ ಶ್ರೀಯುತ ವಾಸುದೇವ ಆಚಾರ್ಯ ಬಾಳೆಬೈಲು ಪೆರ್ಡೂರು ಉಡುಪಿ ತುಳುವ ಮಹಾಸಭಾದ ಭೇಟಿ

0
73

[ತುಳುವಲ್ಡ್ ಫೌಂಡೇಶನ್ ಕಟೀಲ್ ನ ತುಳುವ ಮಹಾಸಭಾವು, ನಮ್ಮ ಪೂರ್ವಿಕರ ಮಾತಿನಂತೆ ಆದಾಯದಲ್ಲಿ ನಾಲ್ಕು ಭಾಗ ಮಾಡಿ ಮೊದಲನೆ ಪಾಲು ದಿನನಿತ್ಯದ ಖರ್ಚುಗಳಿಗೆ, ಎರಡನೆಯದು ಆರೋಗ್ಯಕ್ಕಾಗಿ, ಮೂರನೆಯದು ಉಳಿತಾಯಕ್ಕಾಗಿ, ನಾಲ್ಕನೇ ಪಾಲು ಸಮಾಜ ಸೇವೆಗಾಗಿ ವ್ಯಯಿಸಿ ಎಂದು ಹೇಳಿದ್ದಾರೆ, ಅಂತೆಯೇ ಉಡುಪಿ ತಾಲೂಕು ತುಳುವ ಮಹಾಸಭಾವು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಅಲ್ಲದೇ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ಅವಿಸ್ಮರಣೀಯ.]

ಶ್ರೀಯುತ ವಾಸುದೇವ್ ಆಚಾರ್ಯರವರನ್ನು ಉಡುಪಿ ತುಳು ಮಹಾಸಭಾದ ಪ್ರಧಾನ ಸಂಚಾಲಕರು, ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಚಾಲಕರಾದ ಸೌಮ್ಯರಾಣಿ ವಿಶ್ವನಾಥ, ಶಿವಪ್ರಸಾದ್ ಪೆರ್ಡೂರು, ಪ್ರಶಾಂತ್ ಹಿರಿಯಡ್ಕ, ನವೀನ್ ಬಾಳೆಬೈಲ್ ರವರು ತುಳುವ ಮಹಾಸಭಾವನ್ನು ಬಲಪಡಿಸುವ ನಿಟ್ಟಿನಲ್ಲಿ ಭೇಟಿ ನೀಡಿದರು.

ಉಡುಪಿ ಜಿಲ್ಲೆಯ ಪೆರ್ಡೂರಿನ ಬಾಳೆಬೈಲಿನ ಶ್ರೀಯುತ ದಿವಂಗತ ಕಿಟ್ಟ ಆಚಾರ್ಯ ಮತ್ತು ದಿವಂಗತ ಸೀತಾ ಆಚಾರ್ಯರ ಮಗನಾಗಿ ದಿನಾಂಕ 8-9-1959 ರಲ್ಲಿ ಜನಿಸಿದ ಇವರು ಆ ಕಷ್ಟದ ದಿನಗಳಲ್ಲಿಯೂ 5ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಬಾಳೆಬೈಲು ಇಲ್ಲಿ ಪೂರೈಸಿದರು. ರೈತರ ಮಗನಾದ ಇವರು ಮನೆಯ ಕಷ್ಟಗಳಿಗೆ ಕೈ ಜೋಡಿಸಲು 13ನೇ ವಯಸ್ಸಿನಲ್ಲಿಯೇ ಪೆರ್ಡೂರಿನ ದಿವಂಗತ ಕೃಷ್ಣ ಆಚಾರ್ಯರೊಂದಿಗೆ ಮರದ ಕೆಲಸದ ಕಾಯಕವನ್ನು ಪ್ರಾರಂಭಿಸಿ, ತದನಂತರ ತಮ್ಮ 20ನೇ ವಯಸ್ಸಿನಲ್ಲಿ ದಿವಂಗತ ಪದ್ಮನಾಭ ಆಚಾರ್ಯರೊಂದಿಗೆ ದೂರದ ಮುಂಬೈಗೆ ವಜ್ರದ ಕೆಲಸಕ್ಕೆ ತೆರಳಿದರು. “ತಾವೊಂದು ಬಗೆದರೆ ದೈವ ಮತ್ತೊಂದು ಬಗೆಯುತ್ತದೆ” ಎಂಬಂತೆ ಅನಾರೋಗ್ಯದ ನಿಮಿತ್ತ ಊರಿಗೆ ಬಂದ ಇವರಿಗೆ ಉಪ್ಪೂರಿನ ಅಮ್ಮನವರ ಕಟ್ಟೆಗೆ ಹೋದಾಗ ಅಚಾನಕ್ಕಾಗಿ ಆಕರ್ಷಣೆ ಉಂಟಾಗಿ 24ನೇ ವಯಸ್ಸಿನಲ್ಲಿಯೇ ದೇವಿಪಾತ್ರಿ ದಿವಂಗತ ಉಪ್ಪೂರು ಚೆನ್ನಯ್ಯ ಆಚಾರ್ಯರಿಂದ ಶಿಷ್ಯತ್ವವನ್ನು ಸ್ವೀಕರಿಸಿ, 26ನೇ ವಯಸ್ಸಿಗೆ ಉಪ್ಪೂರು ಅಮ್ಮನವರ ಕಟ್ಟೆಯಲ್ಲಿ ದೇವಿಪಾತ್ರಿಯಾಗುವ ಸೌಭಾಗ್ಯವನ್ನು ಪಡೆದು ಅಂದಿನಿಂದ ಸತತವಾಗಿ 39 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ 31 ವರ್ಷಗಳಿಂದ ಚಿಕ್ಕಮ್ಮ ದೇವಸ್ಥಾನ ಮಣಿಪುರ, 30 ವರ್ಷಗಳಿಂದ ಬಾರ್ಕೂರು ಮಹಾಕಾಳಿ, 29 ವರ್ಷಗಳಿಂದ ಮಹಾಮ್ಮಾಯಿ ಮಾರಿಗುಡಿ ಕಲ್ಮಾಡಿ, 18 ವರ್ಷಗಳಿಂದ ಪಡುಕುಡೂರು ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ, 17 ವರ್ಷಗಳಿಂದ ಶಾರದಾಂಬ ದೇವಸ್ಥಾನ ಚಿಟ್ಪಾಡಿ, ಹಾಗೂ 4 ವರ್ಷಗಳಿಂದ ಮಹಿಷಮರ್ದಿನಿ ದೇವಸ್ಥಾನ ಕಡಿಯಾಳಿಯಲ್ಲಿ ಸೇವೆ ಸಲ್ಲಿಸಿಕೊಂಡು ಬಂದಿರುತ್ತಾರೆ, ದೀಕ್ಷೆ ಸಂದರ್ಭ ಗುರುಗಳಿಗೆ ಕೊಟ್ಟ ಮಾತಿನಂತೆ ಇಂದಿಗೂ ಸ್ವ-ಪ್ರತಿಷ್ಠೆ, ಯಾವುದೇ ನಿರೀಕ್ಷೆಗಳಿಲ್ಲದೇ ದೇವಿಯ ಸೇವೆಯನ್ನು ಮಾಡಿಕೊಂಡು, ಎಷ್ಟೋ ಕುಟುಂಬಗಳಲ್ಲಿ ನಿರಂತರವಾಗಿ ದೇವಿ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿಯಲ್ಲಿ ಮರದ ಕಾಯಕವನ್ನು ನಡೆಸುತ್ತಿರುವ ಇವರು ದೈವಗಳ ಮಣೆ-ಮಂಚ, ಮುಂಡಿಗೆಗಳ ತಯಾರಿಯಲ್ಲಿ ಹೊರರಾಜ್ಯಗಳಿಗೂ ಪರಿಚಿತರು, ಮುಖ್ಯದ್ವಾರಗಳ ಕೆತ್ತನೆಯ ಕೆಲಸದಲ್ಲಿ ನಿಪುಣರು. ಅಲ್ಲದೇ ಬೆಂಗಳೂರಿಗೂ 6.5 ಅಡಿ ಎತ್ತರದ ರಥವನ್ನು ನಿರ್ಮಾಣ ಮಾಡಿಕೊಟ್ಟಂತಹ ಕೀರ್ತಿ ಇವರಿಗಿದೆ. ಸರಳ ಸಜ್ಜನಿಕೆಯ ವ್ಯಕ್ತಿಯಾದ ಇವರು 8-2-1996 ರಲ್ಲಿ ಉಪ್ಪೂರಿನ ಶಾಂತರೊಂದಿಗೆ ದಾಂಪತ್ಯ ಜೀವನವನ್ನು ಆರಂಭಿಸಿದ ಇವರಿಗೆ ತುಳುವ ಮಹಾಸಭಾ ದ ಸಂಚಾಲಕರು, ತಂದೆಯಂತೆ ದಾರು ಶಿಲ್ಪಿ, ನಕ್ಷಾಶಿಲ್ಪಿಯಾದ ಮಗ ಶಿವಪ್ರಸಾದ್ ಹಾಗೂ ಮಗಳು ಪವಿತ್ರ ಅಳಿಯ ಪುಷ್ಕರ್, ಮೊಮ್ಮಗ ರೊಂದಿಗೆ ಸುಖಜೀವನವನ್ನು ನಡೆಸುತ್ತಿದ್ದಾರೆ.

ದೈವಾರಾಧನೆಯಾಗಲಿ, ದೇವಿಯ ಆರಾಧನೆಯಲ್ಲಾಗಲಿ ಆಡಂಬರಕ್ಕೆ ಅವಕಾಶ ಕೊಡದೆ ಹಿರಿಯರ ಮಾರ್ಗದರ್ಶನದಂತೆ ಹಿಂದಿನ ಕಟ್ಟುಪಾಡುಗಳು ಮುಂದುವರೆದರೆ ಪ್ರಕೃತಿ ಆರಾಧನೆಯೊಂದಿಗೆ ಸಂಸ್ಕೃತಿ, ಆಚಾರ-ವಿಚಾರಗಳು ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂಬಂತೆ , ವಾಸುದೇವ ಆಚಾರ್ಯರವರ ಕುಟುಂಬಕ್ಕೆ ಬಸ್ರೂರು ಕ್ಷೇತ್ರದ ತುಳುವೇಶ್ವರ ಹಾಗೂ ತುಳುವೇಶ್ವರಿ ದೇವರು, ದೈವಗಳು ಸುಖ ಶಾಂತಿ ನೆಮ್ಮದಿ ಸಂತೋಷ ಆಯುರಾರೋಗ್ಯವನ್ನು ಕರುಣಿಸಲಿ, ಇನ್ನು ಹೆಚ್ಚಿನ ಸಮಾಜಮುಖಿ ಸೇವೆಗಳು ಇವರಿಂದ ನೆರವೇರುವಂತಾಗಲಿ ಎಂಬುದು ನಮ್ಮ ಆಶಯ.


ಬರಹ – ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು

LEAVE A REPLY

Please enter your comment!
Please enter your name here