ವಿಟ್ಲ : ಜನ ಸಂಚಾರ ವಿರಳವಿದ್ದ ಪ್ರದೇಶ ಗುಡ್ಡದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸಾಲೆತ್ತೂರು ಗ್ರಾಮದಲ್ಲಿ ನಡೆದಿದೆ.
ಪಾಲ್ತಾಜೆ ನಿವಾಸಿ ನಾರಾಯಣ ಪೂಜಾರಿ ಮೃತ ವ್ಯಕ್ತಿ ಎಂದು ಗುರುತಿಸಲಾಗಾಗಿದೆ. ಸ್ಥಳೀಯ ನಿವಾಸಿಯೊಬ್ಬರು ಮಧ್ಯಾಹ್ನ ವೇಳೆ ಗುಡ್ಡಕ್ಕೆ ಕಟ್ಟಿಗೆ ತರಲು ಹೋದಾಗ ಪೊದೆಗಳ ಎಡೆಯಲ್ಲಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ತಕ್ಷಣವೇ ಆ ವ್ಯಕ್ತಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ವಿಟ್ಲ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿ ಪಾಲ್ತಾಜೆ ನಿವಾಸಿ ನಾರಾಯಣ ಪೂಜಾರಿ ಎಂಬುದು ತಿಳಿದುಬಂದಿದೆ. ಮೃತರ ಪತ್ನಿ ಮತ್ತು ಮಕ್ಕಳು ಕೆಲ ವರ್ಷಗಳ ಹಿಂದೆ ನಾರಾಯಣ ಪೂಜಾರಿ ಜೊತೆ ಮನಸ್ತಾಪ ಬಂದು ಪೆರುವಾಯಿ ಸಮೀಪ ವಾಸವಾಗಿದ್ದಾರೆ. ಕೆಲ ಸಮಯಗಳಿಂದ ಒಬ್ಬಂಟಿಯಾಗಿ ನಿರ್ಜನ ಪ್ರದೇಶದ ಪಾಲ್ತಾಜೆ ಗುಡ್ಡದಲ್ಲಿ ಮಲಗುತ್ತಿದ್ದ ನಾರಾಯಣ ಪೂಜಾರಿ ಮೂರು ದಿನಗಳ ಹಿಂದೆ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.
ಭಾಗಶಃ ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಟ್ಲ ಸಮುದಾಯ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಡಿತದ ಚಟ ಹೊಂದಿದ್ದ ನಾರಾಯಣ ಪೂಜಾರಿ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.