ಕಾರ್ಕಳ : ಪರಿಸರ ಸಂರಕ್ಷಣೆ ಹಾಗೂ ಹಸಿರು ವೃದ್ಧಿಯ ಉದ್ದೇಶದಿಂದ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ‘ಧನ್ಯವಾದ್–ವೃಕ್ಷ ಸಂವರ್ಧನೆ ಹಾಗೂ ಸಂರಕ್ಷಣೆ ಯೋಜನೆ’ಯಡಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಆಗಸ್ಟ್ 9ರಂದು ಪೂರ್ವಾಹ್ನ ಕಾರ್ಕಳದ ಬಂಗ್ಲೆ ಗುಡ್ಡೆ ಸಮೀಪದ ಕಜೆ ಪರಿಸರದಲ್ಲಿರುವ ‘ರೋಟರಿ ವನ’ದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ, ರೊ. ಡಾ. ಭರತೇಶ್ ಆದಿರಾಜ್ ಅವರ ಮಾರ್ಗದರ್ಶನದಲ್ಲಿ ಹಾಗೂ ಕ್ಲಬ್ ಅಧ್ಯಕ್ಷ ರೊ. ಮಂಜುನಾಥ ಹೆಗ್ಡೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿವಿಧ ಪ್ರಭೇದಗಳಿಗೆ ಸೇರಿದ 50ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು. ಗಿಡಗಳ ಸಂರಕ್ಷಣೆ ಹಾಗೂ ಮುಂದಿನ ದಿನಗಳಲ್ಲಿ ಅವುಗಳ ಸಮರ್ಪಕ ಬೆಳವಣಿಗೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಗಮನ ಹರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಪೂರ್ವ ಅಧ್ಯಕ್ಷರಾದ ರೊ. ಉಪೇಂದ್ರ ವಾಗ್ಲೆ, ರೊ. ಪ್ರಕಾಶ್ ವಾಗ್ಲೆ, ರೊ. ಸೋಮಶೇಖರ್ ಹಾಗೂ ರೊ. ಸುಜಯ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು. ರೊ. ಸುಜಯ್ ಅವರು ಗಿಡ ನೆಡುವಿಕೆಗೆ ಅಗತ್ಯವಾದ ಕಾಮಗಾರಿ ಹಾಗೂ ಇತರ ವ್ಯವಸ್ಥೆಗಳನ್ನು ಕಲ್ಪಿಸಿದರು.

ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಸಮಾಜದ ಪ್ರತಿಯೊಬ್ಬರೂ ಅರಿತುಕೊಂಡು ಹೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಿಕೊಡಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.

