ಸರಕಾರಿ ಪದವಿ ಪೂರ್ವ ಕಾಲೇಜ್ ಕೊಯ್ಯೂರು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು,ಲಾಯಿಲ ವಲಯ- ಇವರು ಜಂಟಿಯಾಗಿ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ಕಾನೂನು ಮಾಹಿತಿ ಶಿಬಿರದಲ್ಲಿ ಮಾತನಾಡಿದ ಖ್ಯಾತ ನೋಟರಿ ನ್ಯಾಯವಾದಿಗಳಾದ ಬಿ ಕೆ ಧನಂಜಯ್ ರವರು ಸಂವಿಧಾನವನ್ನು ಗೌರವಿಸುವುದು ಮತ್ತು ಪಾಲಿಸುವುದು ನಮ್ಮ ಆದ್ಯ ಕರ್ತವ್ಯ. ನಾವು ನಮ್ಮ ಬೇಕು ಬೇಡಗಳಿಗಾಗಿ ಮತ್ತು ಹಕ್ಕಿಗಾಗಿ ಹೋರಾಡುತ್ತೇವೆ. ನಮ್ಮ ಕರ್ತವ್ಯದ ಪ್ರಜ್ಞೆ ಇಲ್ಲದೆ ಸಾರ್ವಜನಿಕ ಸ್ವತ್ತುಗಳನ್ನು ಹಾನಿ ಮಾಡುತ್ತೇವೆ. ನಮ್ಮ ಹಕ್ಕಿಗಾಗಿ ಹೋರಾಡುವ ನಮಗೆ ನಮ್ಮ ಸಂವಿಧಾನದಲ್ಲಿರುವ ಕರ್ತವ್ಯ ಪ್ರಜ್ಞೆ ಯಾಕಿಲ್ಲ? ಎನ್ನುತ್ತಾ ವಿದ್ಯಾರ್ಥಿಗಳು ಮುಂದಕ್ಕೆ ರಾಷ್ಟ್ರ ನಿರ್ಮಾಣದಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬಹುದು ಮತ್ತು ನಿತ್ಯ ಜೀವನದಲ್ಲಿ ಪಾಲಿಸ ಬೇಕಾದಂತಹ ನಿಯಮಗಳ ಹಾಗೂ ಕಾನೂನಿನ ಅರಿವಿನ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜ್ ಪ್ರಾಚಾರ್ಯರಾದ ಶ್ರೀಯುತ ಮೋಹನ ಗೌಡ ಇವರು ಮಾನವರಾದ ನಾವು ಯಾರೂ ಪರಿಪೂರ್ಣರಲ್ಲ. ಆದರೆ ನಮಗೆ ಆಗಾಗ ಬೇರೆ ಬೇರೆ ಮಾಹಿತಿ ಮಾರ್ಗದರ್ಶನಗಳು ಸಿಕ್ಕಿದಾಗ ನಾವು ಪರಿಪೂರ್ಣತೆಯೆಡೆ ಸಾಗಲು ಸಹಕಾರಿಯಾಗುತ್ತದೆ. ಈ ನೆಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ವಿದ್ಯಾರ್ಥಿಗಳಿಗಾಗಿ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವೆಂದರು.
ಭಜನಾಪರಿಷತ್ತಿನ ರಾಜ್ಯಾಧ್ಯಕ್ಷರಾದ ಚಂದ್ರ ಶೇಖರ ಸಾಲ್ಯಾನ್ ರವರು ಪ್ರಾಸ್ತವಿಕವಾಗಿ ಮಾತನಾಡಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡಯವರು ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ದೂರದೃಷ್ಟಿಯಿಂದ ಪ್ರಾರಂಭಗೊಂಡ ಭಜನಾಪರಿಷತ್ತು ಇಂದು ಅವರ ಆಶಯದಂತೆ ವಿವಿಧ ಸಾಮಾಜಿಕ ಜವಾಬ್ದಾರಿಗಳಾದ ಅರೋಗ್ಯ ಮಾಹಿತಿ ಶಿಬಿರ, ಕಾನೂನು ಮಾಹಿತಿ ಕಾರ್ಯಕ್ರಮ, ಸಾಮಾಜಿಕ ದುಶ್ಚಟ ನಿವಾರಣೆ, ಉದ್ಯೋಗ ಮಾಹಿತಿ ಶಿಬಿರ ಮುಂತಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ ಎನ್ನುತ್ತಾ ಕಾರ್ಯಕ್ರಮಕ್ಕೆಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ರವಿ ಚಾರ್ಮಾಡಿ, ಲಾಯಿಲ ವಲಯಾಧ್ಯಕ್ಷರಾದ ಶ್ರೀ ಜನಾರ್ಧನ ಲಾಯಿಲ ಭಾಗವಹಿಸಿದ್ದರು. ವಲಯ ಜೊತೆ ಕಾರ್ಯದರ್ಶಿಯಾದ ಪೂರ್ಣಿಮಾ ಹೇಮಂತ ಜೆoಕಿನಡ್ಕ, ವಲಯ ಕೋಶಾಧಿಕಾರಿ ದಿನೇಶ್ ಜಾಲ್ನಾ ಪು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವಿನಯ, ಚಿರಸ್ವಿ, ಸಹಲ, ವಿದ್ಯಾ, ಸ್ವಾತಿ ಇವರುಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಭವ್ಯ ವಂದಿಸಿ, ಇತಿಹಾಸ ಉಪನ್ಯಾಸಕರಾದ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ತೃಪ್ತಿ, ಮಾಯಿಲ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

