ಪಶ್ಚಿಮ ವಲಯ ಪೊಲೀಸ್‌ ಕರ್ತವ್ಯ ಕೂಟ : ಉಡುಪಿ ಜಿಲ್ಲೆಗೆ ‘ಸರ್ವಾಂಗೀಣ ಚಾಂಪಿಯನ್’ ಪಟ್ಟ

0
43

ಉಡುಪಿ : ಮಣಿಪಾಲ ಮಾಹೆ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಮಂಗಳವಾರ ನಡೆದ 8ನೇ ಪಶ್ಚಿಮ ವಲಯ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಪಡೆಯು ಅತೀ ಹೆಚ್ಚು ಪದಕಗಳನ್ನು ಬಾಚಿಕೊಳ್ಳುವ ಮೂಲಕ ‘ಸರ್ವಾಂಗೀಣ ತಂಡ ಪ್ರಶಸ್ತಿ’ (ಓವರ್ ಆಲ್ ಚಾಂಪಿಯನ್) ಪಡೆದುಕೊಂಡಿದೆ.

ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನ ‘ಸ್ನೈಪರ್’ ಅತ್ಯುತ್ತಮ ಶ್ವಾನ ಪ್ರಶಸ್ತಿಗೆ ಭಾಜನವಾಗಿದ್ದು, ಅದರ ಹ್ಯಾಂಡ್ಲರ್ ಹರೀಶ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಶ್ಚಿಮ ವಲಯ ಪೊಲೀಸ್ ಉಪಮಹಾನಿರೀಕ್ಷಕ (ಡಿಐಜಿ) ಚೇತನ್ ಆರ್., ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಪೊಲೀಸರು ತಮ್ಮ ದೈನಂದಿನ ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಕಳೆದ ವರ್ಷ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪದಕ ಗಳಿಸಿದ್ದ ಉಡುಪಿ ಡಿಎಆರ್ ಸಿಬ್ಬಂದಿ ಲೋಕೇಶ್ ಹಾಗೂ ಕರ್ತವ್ಯ ಕೂಟದ ನೋಡಲ್ ಅಧಿಕಾರಿಯಾಗಿ ಕಾರ್ಯಕ್ರಮ ನಿರ್ವಹಿಸಿದ ಗೌರೀಶ್ ಎ.ಸಿ. ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್ ಶಂಕರ್, ಮಾಹೆ ಪ್ರೊ-ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್, ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕಿ ಸುಜಾತ ಕೆ.ಎಂ., ಮಾಹೆಯ ಡಾ. ಅನಿಲ್ ಭಟ್, ಡಾ. ವಿನೋದ್ ಸಿ. ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಪೊಲೀಸ್ ನಿರೀಕ್ಷಕ ಸೋಮಶಂಕರ್ ಎನ್. ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ಶಿವಾನಂದ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂದಿಸಿದರು.

ವಿವಿಧ 20 ವಿಭಾಗಗಳಲ್ಲಿ ಸ್ಪರ್ಧೆ

ಆಗಸ್ಟ್ 31ರಿಂದ ಆರಂಭಗೊಂಡ ಕರ್ತವ್ಯ ಕೂಟದಲ್ಲಿ ಮಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ನುರಿತ ಸಿಬ್ಬಂದಿ ಭಾಗವಹಿಸಿದ್ದರು. ಸೈಂಟಿಫಿಕ್ ಏಡ್ಸ್ ಟು ಇನ್ವೆಸ್ಟಿಗೇಷನ್, ಗಣಕಯಂತ್ರ ನೈಪುಣ್ಯತೆ, ಫೋಟೋಗ್ರಫಿ, ವೀಡಿಯೋಗ್ರಫಿ, ವಿದ್ವಂಸಕ ಕೃತ್ಯ ತಪಾಸಣೆ ಹಾಗೂ ಶ್ವಾನ ದಳ ಸೇರಿದಂತೆ ಒಟ್ಟು 20 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು.