ಬಂಟ್ವಾಳ : ಹಿಂದು ಜಾಗರಣ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಜೇಶ್ ನಾಯ್ಕ್ ಕರೋಪಾಡಿ ಅವರ ವಿರುದ್ಧ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಗಡಿಪಾರು ಆದೇಶ ಹೊರಡಿಸಿರುವುದನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರದ ಮಂತ್ರಿಗಳನ್ನು ಮೆಚ್ಚಿಸಲು ಪೊಲೀಸ್ ಇಲಾಖೆಯು ಕೇವಲ ಹಿಂದು ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವುದು ಖಂಡನೀಯ ಎಂದು ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಪ್ರಶಾಂತ್ ಕೆಂಪುಗುಡ್ಡೆ ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಇಲಾಖೆಯು ನೈಜ ಅಪರಾಧಿಗಳನ್ನು ಬಿಟ್ಟು ಹಿಂದು ಕಾರ್ಯಕರ್ತರ ಮೇಲೆ ಕಣ್ಣಿಡುತ್ತಿದೆ.
ಜಿಲ್ಲೆಯ ಪ್ರಸ್ತುತ ಸ್ಥಿತಿಗತಿಗೆ ಈ ಕೆಳಗಿನ ಘಟನೆಗಳೇ ಸಾಕ್ಷಿ
ಸಮಾಜಘಾತುಕರ ರಾಜಾರೋಷ ಸಂಚಾರ: ಪುತ್ತೂರಿನಲ್ಲಿ ಎರಡನೇ ಬಾರಿಗೆ ಪೊಲೀಸ್ ಜೀಪಿನಿಂದಲೇ ಎಳೆದು ಹಲ್ಲೆ ನಡೆಸಿದ ಗೂಂಡಾಗಳು ಇಂದು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.
ಮಾಫಿಯಾ ತಾಂಡವ: ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಹಾಗೂ ಗಾಂಜಾ ಮಾಫಿಯಾ ವ್ಯಾಪಕವಾಗಿ ಹರಡಿದ್ದು, ಯುವಜನತೆಯ ಭವಿಷ್ಯ ಹಾಳಾಗುತ್ತಿದ್ದರೂ ಸೂಕ್ತ ನಿಯಂತ್ರಣ ಸಾಧ್ಯವಾಗಿಲ್ಲ.
ಉಗ್ರ ಚಟುವಟಿಕೆಗಳ ಸಂಶಯ: ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡು ನಿಷೇಧಕ್ಕೊಳಗಾಗಿರುವ ಪಿ.ಎಫ್.ಐ (PFI) ಉಗ್ರರು ಜಿಲ್ಲೆಯಲ್ಲಿ ಮತ್ತೆ ಸಕ್ರಿಯರಾಗುತ್ತಿರುವ ದಟ್ಟ ಸಂಶಯ ವ್ಯಕ್ತವಾಗುತ್ತಿದೆ.
ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಹಾದಿಗೆ ತರಬೇಕಾದ ಪೊಲೀಸ್ ಅಧಿಕಾರಿಗಳು, ಇಂತಹ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸದೆ ಕೇವಲ ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ಪೋಲಿಸ್ ಇಲಾಖೆ ತಕ್ಷಣವೇ ತನ್ನ ಈ ಪಕ್ಷಪಾತ ಧೋರಣೆಯನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಹಿಂದುಗಳು ಮತ್ತು ಪೊಲೀಸ್ ಇಲಾಖೆಯ ನಡುವೆ ನೇರ ಸಂಘರ್ಷದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಇಲಾಖೆಯ ಮೇಲಾಧಿಕಾರಿಗಳು ಇಂತಹ ಪರಿಸ್ಥಿತಿಗೆ ಅವಕಾಶ ಮಾಡಿಕೊಡದೆ, ತಕ್ಷಣವೇ ಗಡಿಪಾರು ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

