ಹಲ್ಲು ಬರಿಸುವಿಕೆ ಎಂದರೇನು?

0
7

ಸಾಮಾನ್ಯವಾಗಿ ಏಳರಿಂದ ಏಳೂವರೆ ವರ್ಷಕ್ಕೆ ಶಾಶ್ವತ ಹಲ್ಲುಗಳು ಮಕ್ಕಳ ಬಾಯಿಯಲ್ಲಿ ಮೂಡಲು ಆರಂಭವಾಗುತ್ತದೆ. ಮಗು ಹುಟ್ಟಿ 6 ತಿಂಗಳಲ್ಲಿ ಹಾಲು ಹಲ್ಲುಗಳು ಹುಟ್ಟಲು ಆರಂಭವಾಗಿ, ಮೂರರಿಂದ ಮೂರುವರೆ ವರ್ಷದ ಹೊತ್ತಿಗೆ ಎಲ್ಲಾ 20 ಹಲ್ಲುಗಳು ಬಂದಿರುತ್ತದೆ. ಹಾಲು ಹಲ್ಲುಗಳಲ್ಲಿ ಬಾಚಿ ಹಲ್ಲು, ಕೊರೆ ಹಲ್ಲು ಮತ್ತು ದವಡೆ ಹಲ್ಲು ಇರುತ್ತದೆ. ಆದರೆ ಮುಂದವಡೆ ಹಲ್ಲು ಇರುವುದಿಲ್ಲ. ಆದರೆ ಶಾಶ್ವತ ಹಲ್ಲುಗಳಲ್ಲಿ ಬಾಚಿ ಹಲ್ಲು, ಕೋರೆ ಹಲ್ಲು ಮತ್ತು ದವಡೆ ಹಲ್ಲುಗಳ ಜೊತೆಗೆ ಮುಂದವಡೆ ಹಲ್ಲುಗಳು ಇರುತ್ತದೆ.

ಈ ಮುಂದವಡೆ ಹಲ್ಲುಗಳು, ದವಡೆ ಹಾಲು ಹಲ್ಲುಗಳ ಜಾಗದಲ್ಲಿ ಮೂಡುತ್ತದೆ. ಶಾಶ್ವತ ದವಡೆ ಹಲ್ಲುಗಳು ದವಡೆ ಹಾಲು ಹಲ್ಲುಗಳ ಹಿಂಭಾಗದಲ್ಲಿ ಮೂಡುತ್ತದೆ. ಮಕ್ಕಳಲ್ಲಿ ಮೊದಲು ಮೂಡುವ ಶಾಶ್ವತ ಹಲ್ಲುಗಳು ಮೊದಲನೇ ದವಡೆ ಹಲ್ಲು ಆಗಿರುತ್ತದೆ. ಸುಮಾರು 7 ರಿಂದ 7 ವರೆ ವರ್ಷಕ್ಕೆ ಈ ಹಲ್ಲುಗಳು ಮೂಡುತ್ತದೆ. ಇದೇ ಸಮಯದಲ್ಲಿ ಮುಂಭಾಗದ ಬಾಚಿ ಹಲ್ಲುಗಳು ಅಲುಗಾಡಲು ಆರಂಭವಾಗಿ ಅವು ಬಿದ್ದು ಹೋದಾಗ ಅದರ ಜಾಗದಲ್ಲಿ ಶಾಶ್ವತ ಬಾಚಿ ಹಲ್ಲುಗಳು ಮೂಡುತ್ತದೆ.

ಆಡು ಮಾತಿನಲ್ಲಿ ಹೇಳುದಾದರೆ ಮಗುವಿಗೆ ಹತ್ತು ವರ್ಷವಾದಾಗ ಹಲ್ಲು ಹಾಲು ಹಲ್ಲುಗಳು ಬಿದ್ದು ಹೋಗಿ ನಂತರ ಶಾಶ್ವತ ಹಲ್ಲುಗಳು ಬಂದಿರುತ್ತದೆ. ಸುಮಾರು 12 ವರ್ಷವಾದಾಗ ಎಲ್ಲಾ ಹಾಲು ಹಲ್ಲುಗಳು ಬಿದ್ದು ಹೋಗಿ ಮಗುವಿನ ಬಾಯಿಯಲ್ಲಿ 24 ಶಾಶ್ವತ ಹಲ್ಲುಗಳು ಇರುತ್ತದೆ. ಮೂರನೇ ದವಡೆ ಹಲ್ಲು 17ರಿಂದ 21ರ ವಯಸ್ಸಿಗೆ ಮೂಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಬದಲಾದ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದಾಗಿ ಈಗೀನ ಯುವಜನತೆಗೆ ವಿಸ್ಡಮ್ ಟೂತ್ ಅಥವಾ ಬುದ್ಧಿ ಹಲ್ಲುಗಳು ಬರುವುದೇ ಇಲ್ಲ. ಮಕ್ಕಳ ಬುದ್ಧಿ ಶಕ್ತಿ ಬೆಳೆಯುವ ಸಮಯದಲ್ಲಿ ಈ ಹಲ್ಲು ಹುಟ್ಟುವುದರಿಂದ ಈ ಮೂರನೇ ದವಡೆ ಹಲ್ಲುಗಳಿಗೆ ವಿಸ್ಡಮ್ ಟೂತ್ ಎಂಬ ಅನ್ವರ್ಥನಾಮ ಬಂದಿದೆ. ಆದರೆ ಮಗುವಿನ ಬುದ್ಧಿ ಶಕ್ತಿಗೂ ಈ ಹಲ್ಲಿಗೂ ಯಾವುದೇ ಸಂಬಂಧವಿಲ್ಲ.

ಹಲ್ಲು ಬರಿಸುವಿಕೆ:-

ಸಾಮಾನ್ಯವಾಗಿ ಮಗುವಿನ ಮುಂಭಾಗದ ಬಾಚಿ ಹಾಲು ಹಲ್ಲುಗಳು ಬೇಗನೆ ಹುಳುಕಾಗಿ ಹಾಳಾಗಿ ಹೋಗಿ, ಬಿದ್ದು ಹೋದಲ್ಲಿ ಆ ಜಾಗದಲ್ಲಿ ದಪ್ಪನೆಯ ವಸಡು ಅಥವಾ ಮಾಂಸದ ಪದರ ಬೆಳೆಯುತ್ತದೆ ಆಗ ಅದರ ಜಾಗದಲ್ಲಿ ಬರಬೇಕಾದ ಶಾಶ್ವತ ಬಾಚಿ ಹಲ್ಲುಗಳಿಗೆ ಈ ದಪ್ಪವಾದ ಪದರವನ್ನು ಭೇದಿಸಿ ಹೊರ ಬರಲು ಸಾಧ್ಯವಾಗುವುದಿಲ್ಲ. ಇಂತಹಾ ಸಂದರ್ಭಗಳಲ್ಲಿ ಮಗುವಿಗೆ 8 ವರ್ಷವಾದರೂ ಬಾಚಿ ಹಲ್ಲು ಬರುವುದಿಲ್ಲ. ಇಂತಹಾ ಸನ್ನಿವೇಶದಲ್ಲಿ ವೈದ್ಯರು ಹಲ್ಲಿನ ಮೇಲ್ಭಾಗದ ದಪ್ಪದಾದ ಮಾಂಸದ ಅಥವಾ ವಸಡಿನ ಪದರನ್ನು ಕತ್ತರಿಸಿ ತೆಗೆದು, ಹಲ್ಲು ಹೊರ ಬರಲು ದಾರಿ ಮಾಡಿಕೊಡುತ್ತಾರೆ. ಇದನ್ನೇ ಹಲ್ಲು ಬರಿಸುವಿಕೆ ಅಥವಾ ದಂತ ಛೇಧನ ಎನ್ನಲಾಗುತ್ತದೆ.

ಹಲ್ಲಿನ ಮೇಲ್ಭಾಗದಲ್ಲಿ ಸಣ್ಣ ಅರಿವಳಿಕೆ ಚುಚ್ಚು ಮದ್ದನ್ನು ನೀಡಿ ಆ ಭಾಗದ ಸಂವೇದನೆಯನ್ನು ನಿಷ್ಕ್ರಿಯಗೊಳಿಸಿ ಹಲ್ಲಿನ ಕಿರಿದಾದ ಭಾಗವನ್ನು ಕಾಣುವಂತೆ ಮಾಡಲಾಗುತ್ತದೆ. ಇದಾದ ಒಂದೆರಡು ವಾರದಲ್ಲಿ ಶಾಶ್ವತ ಬಾಚಿ ಹಲ್ಲುಗಳು ಬಾಯಿಯಲ್ಲಿ ಮೂಡುತ್ತದೆ. ಈ ಶಸ್ತ್ರಚಿಕಿತ್ಸೆ ಮಾಡುವ ಮೊದಲು ಯಾಕಾಗಿ ಹಲ್ಲು ಬಂದಿಲ್ಲ ಎಂಬುದನ್ನು ದಂತ ವೈದ್ಯರು ವಿಶ್ಲೇಷಿಸುತ್ತಾರೆ. ಹಲ್ಲು ತಡವಾಗಿ ಮೂಡಲು ರಸದೂತಗಳ ಕೊರತೆ, ಕ್ಯಾಲ್ಸಿಯಂ ಕೊರತೆ ಅಥವಾ ಇನ್ಯಾವುದೇ ಕಾರಣವನ್ನು ವೈದ್ಯರು ಕಂಡು ಹಿಡಿಯುತ್ತಾರೆ. ಆ ಬಳಿಕ ಒಳಭಾಗದಲ್ಲಿ ಹಲ್ಲು ಇದೆಯೋ ಮತ್ತು ಹಲ್ಲಿನ ಬೇರಿನ ಭಾಗದ ರಚನೆ ಪೂರ್ಣವಾಗಿದೆಯೇ ಎಂಬುದನ್ನು ಕ್ಷ ಕಿರಣದ ಮುಖಾಂತರ ಖಾತರಿಸಿಕೊಂಡು, ಆ ಬಳಿಕ ಸಣ್ಣ ಶಸ್ತ್ರಚಿಕಿತ್ಸೆ ಮುಖಾಂತರ ಹಲ್ಲನ್ನು ಹೊರಬರುವಂತೆ ಮಾಡುತ್ತಾರೆ. ನಿಮ್ಮ ಮಕ್ಕಳಿಗೆ 8 ವರ್ಷವಾದರೂ ಮುಂಭಾಗದ ಶಾಶ್ವತ ಬಾಚಿ ಹಲ್ಲುಗಳು ಬಂದಿಲ್ಲವಾದರೆ ತಕ್ಷಣವೇ ದಂತ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಪಡೆದುಕೊಳ್ಳಿ. ಯಾಕೆಂದರೆ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಈ ಹಲ್ಲುಗಳು ಸರಿಯಾದ ಸಮಯದಲ್ಲಿ ಬರಬೇಕಾದ ಅನಿವಾರ್ಯತೆ ಇದೆ.

ಕೆಲವೊಮ್ಮೆ ಹಲ್ಲು ಮೂಡುವುದು ತಡವಾದಾಗ, ಸ್ನೇಹಿತರಿಂದ ಹಾಸ್ಯಕ್ಕೊಳಗಾಗಿ ಮನಸ್ಸಿಗೆ ಘಾಸಿಯಾಗಿ ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಹಲ್ಲು ಬರುವ ಸಮಯದಲ್ಲಿ ಹಲ್ಲು ಬಂದಲ್ಲಿ ಮಾತ್ರ ಮಗುವಿನ ಮಾನಸಿಕ ದೈಹಿಕ ಬೆಳವಣಿಗೆ ಪರಿಪೂರ್ಣವಾಗುತ್ತದೆ ಎಂಬ ವಿಚಾರವನ್ನು ಹೆತ್ತವರು ಅರಿತುಕೊಂಡಲ್ಲಿ ಮುಂದೊದಗುವ ಸಮಸ್ಯೆಗಳನ್ನು ಆರಂಭದಲ್ಲಿಯೇ ನಿವಾಳಿಸಿ ಹಾಕಬಹುದು. ಅದರಲ್ಲಿಯೇ ಮಗುವಿನ ಮತ್ತು ಸಮಾಜದ ಹಿತ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು

LEAVE A REPLY

Please enter your comment!
Please enter your name here