ಪುತ್ತೂರು : ವಾಟ್ಸಪ್ ಗ್ರೂಪ್‌ಗಳನ್ನು ಕೇವಲ ಸಂದೇಶ ವಿನಿಮಯಕ್ಕೆ ಮಾತ್ರವಲ್ಲ, ಸಮಾಜಮುಖಿ ಕಾರ್ಯಗಳಿಗೂ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಉಡುಪಿ ಜಿಲ್ಲೆಯ ಕೋಟದ ‘ವಿವೇಕ ಬಳಗ–2002’ ಬ್ಯಾಚ್‌ನ ಸದಸ್ಯರು ಸಾಬೀತುಪಡಿಸಿದ್ದಾರೆ.
‘ವಿವೇಕ ಬಳಗ–2002 ಅಕ್ಷರ ಅಭಿಯಾನ’ ಯೋಜನೆಯಡಿ, ಅಗಲಿದ ಸಹಪಾಠಿ ಗುರುಪ್ರಸಾದ್ ಅವರ ಸ್ಮರಣಾರ್ಥ ಪುತ್ತೂರು ತಾಲೂಕಿನ ದೂರದ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಒಡ್ಯಯ 35 ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಬ್ಯಾಚ್ ಸದಸ್ಯರಾದ ಪ್ರವೀಣ್ ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಜನಾರ್ದನ ಅಲ್ಚಾರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಶಾಲೆಯ ಮಕ್ಕಳ ಶಿಕ್ಷಣಕ್ಕೆ ನೆರವಾದ ಬಳಗದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪ್ರೇಮ ಪಡ್ಯಂಬೆಟ್ಟು, ಮುಖ್ಯ ಅತಿಥಿ ಭರತ್ ಪಡುಬಿದ್ರಿ ಉಪಸ್ಥಿತರಿದ್ದರು. ಶಿಕ್ಷಕಿ ಸ್ವರ್ಣಲತಾ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ದಿವ್ಯಾ ಪಡುಬಿದ್ರಿ ವಂದಿಸಿದರು. ಶಾಲೆಯ ಶಿಕ್ಷಕ ವೃಂದ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಹಕರಿಸಿತು.

