ಮೂಡುಬಿದಿರೆ, ಜೂನ್ 27: ಮೂಡುಬಿದಿರೆ ಲಯನ್ಸ್ ಕ್ಲಬ್ ಅಲಂಗಾರ್‌ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 21ರಂದು ಕಡಲಕೆರೆಯ ಸೃಷ್ಟಿ ಹಾಲ್‌ನಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಜಿಲ್ಲಾ 317ರ ದ್ವಿತೀಯ ಉಪ ಜಿಲ್ಲಾ ಗವರ್ನರ್ ವೆಂಕಟೇಶ್ ಹೆಬ್ಬಾರ್ ಅವರು ಪದಗ್ರಹಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಮಂಡಳಿಗೆ ಪ್ರಮಾಣವಚನ ಬೋಧಿಸಿದರು.
2026–27ನೇ ಸಾಲಿನ ಅಧ್ಯಕ್ಷರಾಗಿ ರೋಕಿ ಮಸ್ಕರೇನ್ಹಾಸ್, ಕಾರ್ಯದರ್ಶಿ ಹಾಗೂ ವಲಯ ಪ್ರತಿನಿಧಿಯಾಗಿ ಜೆಸಿಂತ ಡಿಮೆಲ್ಲೊ, ಖಜಾಂಚಿಯಾಗಿ ಆಲ್ವಿನ್ ಡಿಕುನ್ಹಾ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಅಮಿತ್ ಡಿಸಿಲ್ವ, ನಿರ್ಗಮಿತ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಪ್ರಾಂತೀಯ ಅಧ್ಯಕ್ಷ ಎಂ.ಕೆ. ದಿನೇಶ್, ಸ್ಥಾಪಕ ಅಧ್ಯಕ್ಷ ಫಾ. ಬಾಸಿಲ್ ವಾಸ್, ವಲಯ ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ ಹಿಬರೋಡಿ, ಶಿವಪ್ರಸಾದ್ ಬಿ. ಹಾಗೂ ವಲಯ VIIIರ ವಿವಿಧ ಕ್ಲಬ್‌ಗಳ ಅಧ್ಯಕ್ಷರು ಉಪಸ್ಥಿತರಿದ್ದರು.
2025–26ನೇ ಸಾಲಿನಲ್ಲಿ ಕ್ಲಬ್ ಕೈಗೊಂಡ ವಿವಿಧ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದ ವೆಂಕಟೇಶ್ ಹೆಬ್ಬಾರ್, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಇದೇ ವೇಳೆ ಆಲ್ವಿನ್ ರೊಡ್ರಿಗಸ್ ಅವರನ್ನು ಕ್ಲಬ್‌ನ 51ನೇ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕೀಬೋರ್ಡ್ ತರಬೇತಿ ನೀಡುತ್ತಿರುವ ಸಿಸ್ಟರ್ ಸೆಲೆಸ್ತಿನ್ ಅವರನ್ನು ಸಂಗೀತ ಕ್ಷೇತ್ರದ ಸೇವೆಗಾಗಿ ಹಾಗೂ ಆಳ್ವಾಸ್ ಆಸ್ಪತ್ರೆಯಲ್ಲಿ ನಿಸ್ವಾರ್ಥವಾಗಿ ರೋಗಿಗಳಿಗೆ ನೆರವಾಗುತ್ತಿರುವ ವಾರ್ಡ್ ಬಾಯ್ ರಮೇಶ್ ಬಿ. ಅವರನ್ನು ಸಮಾಜಸೇವೆಗೆ ಗೌರವಿಸಲಾಯಿತು.
ನಿರ್ಗಮಿತ ಅಧ್ಯಕ್ಷ ಅಮಿತ್ ಡಿಸಿಲ್ವ ತಮ್ಮ ಅಧಿಕಾರಾವಧಿಯಲ್ಲಿ ಸದಸ್ಯರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ, ನೂತನ ತಂಡಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಸ್ಥಾಪಕ ಅಧ್ಯಕ್ಷ ಫಾ. ಬಾಸಿಲ್ ವಾಸ್, ಪ್ರಾಂತೀಯ ಅಧ್ಯಕ್ಷ ಎಂ.ಕೆ. ದಿನೇಶ್ ಹಾಗೂ ವಲಯ ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ ಹಿಬರೋಡಿ ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.
ಅಮಿತ್ ಡಿಸಿಲ್ವ ಸ್ವಾಗತಿಸಿದರು. ಜೆಸಿಂತ ಡಿಮೆಲ್ಲೊ ವಂದಿಸಿದರು. ಮನೋಹರ್ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.

