ಪೆರ್ನಾಜೆಯಲ್ಲಿ ಕಾಡಾನೆ ಪ್ರತ್ಯಕ್ಷ : ಬಾಳೆ, ಅಡಿಕೆ ಬೆಳೆಗಳು ಧ್ವಂಸ

0
18

ಪೆರ್ನಾಜೆ : ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಹಾಗೂ ಸುತ್ತಮುತ್ತಲಿನ ಕೃಷಿ ಪ್ರದೇಶಗಳಲ್ಲಿ ಕಾಡಾನೆಯೊಂದು ಪ್ರತ್ಯಕ್ಷಗೊಂಡು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಎಸಗಿದೆ.

ಸ್ಥಳೀಯ ಕೃಷಿಕರ ತೋಟಗಳಿಗೆ ರಾತ್ರಿ ವೇಳೆಯಲ್ಲಿ ಲಗ್ಗೆಯಿಟ್ಟ ಆನೆಯು, ಬೆಳೆದು ನಿಂತಿದ್ದ ನೂರಾರು ಬಾಳೆ ಹಾಗೂ ಅಡಿಕೆ ಗಿಡಗಳನ್ನು ತುಳಿದು, ಮುರಿದು ಹಾಕಿ ಸಂಪೂರ್ಣ ಧ್ವಂಸಗೊಳಿಸಿದೆ. ಕಷ್ಟಪಟ್ಟು ಬೆಳೆಸಿದ ಬೆಳೆ ಕಣ್ಣೆದುರೇ ನಾಶವಾಗಿದ್ದು, ರೈತರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿದೆ.

ಈ ಭಾಗದಲ್ಲಿ ಕಳೆದ ಕೆಲವು ಸಮಯದಿಂದ ಕಾಡಾನೆಗಳ ಹಾವಳಿ ಪದೇ ಪದೇ ಮರುಕಳಿಸುತ್ತಿದ್ದು, ಕೃಷಿಕರು ತೀವ್ರ ಭೀತಿಯಲ್ಲಿ ದಿನ ದೂಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಬೇಕು, ಆನೆಯನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕು ಹಾಗೂ ಹಾನಿಗೊಳಗಾದ ರೈತರಿಗೆ ಶೀಘ್ರವೇ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.