Saturday, April 26, 2025
HomeUncategorizedಭಕ್ತಿಯ ಶಕ್ತಿಯಿಂದ ಮನೆಯೇ ಮಂದಿರವಾಗುತ್ತದೆ:ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ

ಭಕ್ತಿಯ ಶಕ್ತಿಯಿಂದ ಮನೆಯೇ ಮಂದಿರವಾಗುತ್ತದೆ:ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ

ಉಜಿರೆ: ಜಪ, ತಪ, ಧ್ಯಾನ ಹಾಗೂ ಮಂತ್ರಪಠಣದಲ್ಲಿ  ಅಪಾರ ಶಕ್ತಿ ಇದ್ದು ಭಕ್ತಿಯ ಶಕ್ತಿಯಿಂದ ಮನೆಯೇ ಮಂದಿರವಾಗುತ್ತದೆ. ಗೃಹಾಲಯವೇ ಜಿನಾಲಯವಾಗುತ್ತದೆ ಎಂದು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಬೆಳ್ತಂಗಡಿ ತಾಲ್ಲೂಕಿನ ಬಂದಾರು ಗ್ರಾಮದ ಬೈಪಾಡಿಯಲ್ಲಿರುವ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪ್ರಥಮ ವಾರ್ಷಿಕೋತ್ಸವ ಸಂದರ್ಭ ಆಯೋಜಿಸಿದ ಶಾಂತಿಚಕ್ರ ಆರಾಧನೆಯಲ್ಲಿ ಮಂಗಲ ಪ್ರವಚನ ನೀಡಿದರು.
ಕುಟುಂಬ ಹಾಗೂ ಮನೆಯ ನಿರ್ವಹಣೆಯಲ್ಲಿ ಗೃಹಿಣಿಯ ಪಾತ್ರ ಮುಖ್ಯವಾಗಿದೆ. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಹೇಳಿದ ಅವರು ಹಗಲಿನ ಕೆಲಸ ಮುಗಿಸಿದ ಬಳಿಕ ಮನೆಯಲ್ಲಿ ಎಲ್ಲರೂ ಜಪ, ತಪ, ಧ್ಯಾನದಲ್ಲಿ ನಿರತರಾಗಿ ಆತ್ಮಕಲ್ಯಾಣ ಮಾಡಿಕೊಳ್ಳಬೇಕು. ಧರ್ಮದ ಮರ್ಮವನ್ನರಿತು ಜೀವನದಲ್ಲಿ ಪಾಲನೆ ಮಾಡಬೇಕು. ಉತ್ತರ ಭಾರತದಲ್ಲಿ ತೀರ್ಥಂಕರರು ಧರ್ಮ ಪ್ರಭಾವನೆ ಮಾಡಿದರೆ, ದಕ್ಷಿಣಭಾರತದಲ್ಲಿ ಆಚಾರ್ಯರು, ಮುನಿಗಳು ಧರ್ಮಪ್ರಭಾವನೆ ಮಾಡಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಕಡೆಗಣಿಸಬಾರದು ಎಂದು ಅವರು ಸಲಹೆ ನೀಡಿದರು.
ಗುರುವಾರ ಬೆಳಿಗ್ಗೆ ೭ ಗಂಟೆಯಿಂದ ತೋರಣಮುಹೂರ್ತ, ವಿಮಾನಶುದ್ಧಿ, ಭಗವಾನ್ ಶಾಂತಿನಾಥ ಸ್ವಾಮಿಗೆ ೨೪ ಕಲಶ  ಅಭಿಷೇಕ, ಪೂಜೆ, ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ, ಲಕ್ಷ ಹೂವಿನ ಪೂಜೆ. ನವಕಲಶ ಅಭಿಷೇಕ  ಕ್ಷೇತ್ರಪಾಲ ಪೂಜೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಬೆಳ್ತಂಗಡಿ ಬಸದಿಯ ಪ್ರಧಾನ-ಅರ್ಚಕ ಪ್ರತಿಷ್ಠಾಚಾರ್ಯ ಕೆ. ಜಯರಾಜ ಇಂದ್ರರರ ನೇತೃತ್ವದಲ್ಲಿ ಬೈಪಾಡಿ ಬಸದಿಯ ಜೀವಿತ್‌ಕುಮಾರ್ ಇಂದ್ರ, ಪುಷ್ಪರಾಜ ಇಂದ್ರ, ಹರ್ಷಿತ್‌ಕುಮಾರ್ ಇಂದ್ರ, ಸುದರ್ಶನ ಇಂದ್ರ ಮತ್ತು ಧರಣೇಂದ್ರ ಇಂದ್ರರು ಪೂಜೆ ಹಾಗೂ ಶಾಂತಿಚಕ್ರ ಆರಾಧನೆಯನ್ನು ನೆರವೇರಿಸಿದರು.

RELATED ARTICLES
- Advertisment -
Google search engine

Most Popular