ಲಾಡ್ಜ್‌ಗೆ ಪೊಲೀಸರೆಂದು ನುಗ್ಗಿ ಮಹಿಳೆ ಅಪಹರಣ : ಐವರ ಬಂಧನ

0
33

ಮಹಿಳೆಯೊಬ್ಬರನ್ನು ಐವರು ಆರೋಪಿಗಳ ತಂಡ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾಹಿತ ಪುರುಷನ ಪತ್ನಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದ ತ್ರಿಶೂರ್‌ನಲ್ಲಿ ಸಂಭವಿಸಿದೆ.

ತಮಿಳುನಾಡಿನ ತಿರುಪ್ಪೂರ್ ಮೂಲದ ಮಹಿಳೆಯೊಬ್ಬರು ತಮ್ಮ ಪುರುಷ ಸ್ನೇಹಿತನೊಂದಿಗೆ ಕೇರಳಕ್ಕೆ ತೆರಳಿ ತ್ರಿಶೂರ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ವಸತಿಗೃಹವೊಂದರಲ್ಲಿ ತಂಗಿದ್ದರು ಎನ್ನಲಾಗಿದೆ. ಈ ವೇಳೆ ಪೊಲೀಸರೆಂದು ಹೇಳಿಕೊಂಡು ಕೊಠಡಿಗೆ ಪ್ರವೇಶಿಸಿದ ಐವರು ಆರೋಪಿಗಳು ಇಬ್ಬರ ಕೈ-ಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಾರಿನಲ್ಲಿ ತಮಿಳುನಾಡಿನತ್ತ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಯಾಣದ ವೇಳೆ ಮಹಿಳೆಯೊಂದಿಗೆ ತೆರಳಿದ್ದ ವ್ಯಕ್ತಿಯ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ಆತನ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಬಳಿಕ ಆತನನ್ನು ತಿರುಪ್ಪೂರ್‌ನ ಆಸ್ಪತ್ರೆಯೊಂದರ ಮುಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ಬಳಿಕ ಮಹಿಳೆಯನ್ನು ಮತ್ತೊಂದು ಕಾರಿಗೆ ಸ್ಥಳಾಂತರಿಸಿದ ಇಬ್ಬರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತಮಿಳುನಾಡು ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ, ಮುಂದಿನ ತನಿಖೆಗಾಗಿ ಪ್ರಕರಣವನ್ನು ತ್ರಿಶೂರ್ ನಗರ ಪೊಲೀಸರಿಗೆ ಹಸ್ತಾಂತರಿಸಿದ್ದರು.

ತನಿಖೆಯ ವೇಳೆ, ಮಹಿಳೆಯೊಂದಿಗೆ ತೆರಳಿದ್ದ ವ್ಯಕ್ತಿಯ ಪತ್ನಿಯೇ ಆತನ ಚಲನವಲನದ ಮೇಲೆ ನಿಗಾ ಇರಿಸಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. ಮೊಬೈಲ್‌ ಸ್ಥಳ ಮಾಹಿತಿ ಪತ್ತೆಹಚ್ಚಿ ಆರೋಪಿಗಳ ತಂಡಕ್ಕೆ ಮಾಹಿತಿ ನೀಡಿ, ಮಹಿಳೆಯನ್ನು ಅಪಹರಿಸುವಂತೆ ಸುಪಾರಿ ನೀಡಿರುವ ಆರೋಪವೂ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.