ಬಂಟ್ವಾಳ : ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಹೆಚ್ಚೇನುಗಳು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಅಸ್ವಸ್ಥಗೊಂಡಿದ್ದ 74 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಿ.ಕಸಬಾ ಗ್ರಾಮದ ಕೆಮ್ಮಟ್ಟೆ ಗುಡ್ಡೆಯಲ್ಲಿ ನಡೆದಿದೆ.
ಮೃತರನ್ನು ಕೆಮ್ಮಟ್ಟೆ ಗುಡ್ಡೆ ನಿವಾಸಿ ಕಮಲಾ (74) ಎಂದು ಗುರುತಿಸಲಾಗಿದೆ. ಕಮಲಾ ಅವರು ಸೆ.23ರಂದು ಬೆಳಿಗ್ಗೆ ಸುಮಾರು 9.30ರ ವೇಳೆಗೆ ಮನೆಯ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ಹುಲ್ಲು ತೆಗೆಯಲು ಹಾಗೂ ಕೃಷಿ ಕೆಲಸಕ್ಕಾಗಿ ತೆರಳಿದ್ದರು. ಈ ವೇಳೆ ಏಕಾಏಕಿ ಹೆಚ್ಚೇನುಗಳು ದಾಳಿ ನಡೆಸಿದ್ದು, ಅವರ ಬೆನ್ನು, ಕಾಲು, ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಕಚ್ಚಿವೆ ಎನ್ನಲಾಗಿದೆ.
ದಾಳಿಯಿಂದ ಅಸ್ವಸ್ಥಗೊಂಡ ಕಮಲಾ ಅವರು ಮನೆಗೆ ಮರಳಿದ್ದು, ನಡೆದ ಘಟನೆ ಕುರಿತು ಪುತ್ರ ದಿನೇಶ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ದಿನೇಶ್ ಅವರು ಅವರನ್ನು ಬಂಟ್ವಾಳದ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಕಮಲಾ ಅವರನ್ನು ಮನೆಗೆ ಕರೆತರಲಾಗಿತ್ತು.
ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕಮಲಾ ಅವರು ಮಾತನಾಡದೆ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣ ಅಂಬುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಯಿಂದ ಕೆಮ್ಮಟ್ಟೆ ಗುಡ್ಡೆ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೃಷಿ ಕೆಲಸಕ್ಕೆ ತೆರಳುವವರು ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

