ಮಹಿಳಾ ಮೀಸಲು ಮಸೂದೆ: ಸಂಸದೀಯ ವ್ಯವಸ್ಥೆಯಲ್ಲಿ ಬಿಜೆಪಿಗೆ ಮುಖಭಂಗ, ಪ್ರಜಾತಂತ್ರ ವ್ಯವಸ್ಥೆಗೆ ಗೆಲುವು – ಡಾ. ಆನಂದ ಕುಮಾರ್

0
5

ಬೆಂಗಳೂರು : ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ನೈಜ ಬದ್ಧತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇಲ್ಲ. ಸರ್ವಾಧಿಕಾರಿ ಧೋರಣೆ, ಏಕಪಕ್ಷೀಯವಾಗಿ ಕೈಗೊಂಡ ನಿರ್ಧಾರಕ್ಕೆ ಸಂಸದೀಯ ವ್ಯವಸ್ಥೆಯಲ್ಲಿ ಮುಖಭಂಗವಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ನೈಜ ಗೆಲುವು ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.

ಸಂಸತ್ತಿನಲ್ಲಿ ಬಿದ್ದುಹೋಗಿರುವ ಮಹಿಳಾ ಮೀಸಲಾತಿ ಮಸೂದೆಯೇ ಅಲ್ಲ ಬದಲಾಗಿ ಮಹಿಳೆಯರ ಹೆಸರಿನಲ್ಲಿ ತರಲು ಯತ್ನಿಸಿದ್ದ ಅಸಾಂವಿಧಾನಿಕ ಕ್ಷೇತ್ರ ಪುನರ್ವಿಂಗಡನಾ ಮಸೂದೆ. 33% ಮಹಿಳಾ ಮೀಸಲಾತಿ ಮಸೂದೆ 2023 ರಲ್ಲೇ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಆದರೆ ಈ ಸರ್ಕಾರ ಅದನ್ನು ಜಾರಿಗೆ ತರುವ ಬದ್ಧತೆ ತೋರಿಲ್ಲ. ಸಂಸತ್ತಿನಲ್ಲಿ ಎರಡೂವರೆ ವರುಷಗಳ ಹಿಂದೆ ಅಂಗೀಕಾರವಾಗಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಹಾಲಿ ಶಾಸನ ಸಭೆಗಳ ಸಂಖ್ಯಾಬಲಕ್ಕೆ ಅನುಗುಣವಾಗಿ ಜಾರಿ ಮಾಡಬೇಕಾಗಿತ್ತು. ಹೊಸ ಜನಗಣತಿ ನಂತರ ಅನುಷ್ಠಾನಗೊಳಿಸಲು ಮುಂದಾಗಿರುವ ಕ್ರಮ ಕುರುಡ ಆನೆ ಮುಟ್ಟಿದ ಕಥೆಯಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ದಕ್ಷಿಣ ಭಾರತ ವಿರೋಧಿ ‘ಕ್ಷೇತ್ರ ಪುನರ್ವಿಂಗಡಣೆ’ ಮಸೂದೆ ಇದಾಗಿದೆ. ಯಾವುದೇ ಮಸೂದೆ ತರುವ ಮುನ್ನ ಜನಾಭಿಪ್ರಾಯ, ಜನಪ್ರತಿನಿಧಿಗಳ ನಿಲುವುಗಳಿಗೆ ಮನ್ನಣೆ ನೀಡಬೇಕಿತ್ತು. ಮಸೂದೆಗೆ ಅನುಮೋದನೆ ದೊರೆಯವುದಿಲ್ಲ ಎನ್ನುವುದು ಗೊತ್ತಿದ್ದರೂ ಸರ್ಕಾರ ಯಾಕೆ ಈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಹಾಗೊಂದು ವೇಳೆ ಸರ್ಕಾರಕ್ಕೆ ಬದ್ಧತೆ ಇದ್ದಿದ್ದರೆ ಮಸೂದೆಯನ್ನು ಸಂಸತ್ತಿನ ಪರಿಶೀಲನಾ ಸಮಿತಿಗೆ ಯಾಕೆ ಒಪ್ಪಿಸಲಿಲ್ಲ. ಸರ್ಕಾರಕ್ಕೆ ಮಸೂದೆಯ ನೈಜ ಕಾರಣಗಳನ್ನು ಪರಿಶೀಲನೆಗೆ ಒಳಪಡಿಸುವುದು ಬೇಕಾಗಿರಲಿಲ್ಲ. ಅದಕ್ಕಾಗಿಯೇ ತರಾತುರಿಯಲ್ಲಿ ಮಸೂದೆ ಮಂಡಿಸಿದ್ದಾರೆ. ಅಸಮರ್ಪಕ ತಯಾರಿ ಜೊತೆಗೆ ಮಸೂದೆ ಅಂಗೀಕಾರಕ್ಕೆ ಅಗತ್ಯವಾದ ಬೆಂಬಲವನ್ನು ಸರ್ಕಾರ ಮುಂಚಿತವಾಗಿ ಖಚಿತಪಡಿಸಿಕೊಳ್ಳದೇ ಅತಿ ದೊಡ್ಡ ಲೋಪವೆಸಗಿದೆ ಎಂದು ಹೇಳಿದ್ದಾರೆ.

ಮಹಿಳಾ ಹಕ್ಕುಗಳ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು, ಇದನ್ನು ಚುನಾವಣಾ ಅಸ್ತ್ರವಾಗಿ ಬಳಸಲು ಪ್ರಯತ್ನಿಸಿತು. ಇದರಿಂದ 2029ರ ಲೋಕಸಭೆ ಚುನಾವಣೆಯಿಂದ ಮೀಸಲಾತಿ ಜಾರಿಗೆ ತರಬೇಕೆಂಬ ಯೋಜನೆ ವಿಫಲವಾಗಿದೆ. ಬಿಜೆಪಿ ಜನರ ಬಳಿ ಹೋಗಿ, “ನಾವು ಮಹಿಳೆಯರ ಪರ ನಿಂತಿದ್ದೇವೆ, ವಿರೋಧ ಪಕ್ಷ ತಡೆದಿದೆ” ಎಂಬ ಸಂದೇಶವನ್ನು ಹರಡಲು ಪ್ರಯತ್ನಿಸುತ್ತಿದೆ. ಇದು ಮಹಿಳೆಯರ ಹಕ್ಕುಗಳನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದ್ದರೂ, ಮೋದಿ ಸರ್ಕಾರದ ವಿಳಂಬ ಮತ್ತು ರಾಜಕೀಯ ಲಾಭದ ನೋಟವು ಇದನ್ನು ನಿಜವಾದ ಸುಧಾರಣೆಯ ಬದಲು ರಾಜಕೀಯ ತಂತ್ರವನ್ನಾಗಿ ಮಾಡಿರುವುದು ಸ್ಪಷ್ಟವಾಗಿದೆ.

1996ರಿಂದಲೇ ಮಹಿಳಾ ಮೀಸಲಾತಿ ಮಸೂದೆ ಹಲವು ಬಾರಿ ಮಂಡನೆಯಾಗಿತ್ತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪ್ರಯತ್ನದ ಫಲವಾಗಿ 2010ರಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾದರೂ, ಲೋಕಸಭೆಯಲ್ಲಿ ಪಾಸಾಗಲಿಲ್ಲ. ಕಾರಣ ಆಗ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಬೆಂಬಲ ನೀಡಿರಲಿಲ್ಲ. ಬಿಜೆಪಿಯ ಉಮಾಭಾರತಿ ಸೇರಿದಂತೆ ಹಲವು ನಾಯಕರು ಮಸೂದೆಗೆ ಮೊದಲಿನಿಂದಲೂ ತೀವ್ರ ಅಡ್ಡಿಪಡಿಸಿ ರಾಜಕೀಯ ಮಾಡಿದ್ದರು. ಇಂತಹ ಹಿನ್ನೆಲೆಯವರು ಕಾಂಗ್ರೆಸ್ ಗೆ ಬುದ್ದಿ ಹೇಳಲು ಹೊರಟಿದ್ದಾರೆ ಎಂದು ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.

ಮಸೂದೆ ಒಂದು ವೇಳೆ ಅಂಗೀಕಾರವಾದರೂ, ತಕ್ಷಣಕ್ಕೆ ಅದು ಜಾರಿಗೆ ಬರುವುದಿಲ್ಲ. ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ನಂತರ ಮಾತ್ರ ಜಾರಿಗೆ ತರುವುದಾಗಿ ಹೇಳಿರುವುದರಿಂದ ಮಹಿಳೆಯರಿಗೆ ತಕ್ಷಣದ ನ್ಯಾಯ ನೀಡುವುದನ್ನು ತಡೆಹಿಡಿದಂತಾಗಿದೆ. ಸರ್ಕಾರಕ್ಕೆ ಮಹಿಳಾ ಹಕ್ಕುಗಳ ಬಗ್ಗೆ ನಿಜವಾದ ಬದ್ಧತೆ ಇಲ್ಲ. ಬದಲಿಗೆ ಚುನಾವಣಾ ಲಾಭಕ್ಕಾಗಿ ಈ ಮಸೂದೆ ತಂದಂತೆ ಕಾಣುತ್ತಿದೆ. ದಶಕಗಳಿಂದ ಮಹಿಳೆಯರು ರಾಜಕೀಯದಲ್ಲಿ ಸಮಾನ ಅವಕಾಶಕ್ಕಾಗಿ ಹೋರಾಡುತ್ತಿದ್ದಾರೆ. ಸರ್ಕಾರ ಇದನ್ನು ತಕ್ಷಣ ಜಾರಿಗೆ ತರುವ ಬದಲು, ಭವಿಷ್ಯದ ಅನಿಶ್ಚಿತತೆಗೆ ತಳ್ಳಿದೆ. ಇದು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here