ಹುಬ್ಬಳ್ಳಿ : ಹೊಸ ಮೊಬೈಲ್ ಕೊಡಿಸುವಂತೆ ಕೇಳಿದ ಕಾರ್ಮಿಕನಿಗೆ ಹಳೆ ಸಾಲ ತೀರಿಸುವಂತೆ ಬುದ್ಧಿವಾದ ಹೇಳಿದ್ದ ಕಟ್ಟಡ ನಿರ್ಮಾಣ ಮೇಸ್ತ್ರಿಯೊಬ್ಬರನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಛಬ್ಬಿ ಗ್ರಾಮದ ನಿವಾಸಿ ಹಾಗೂ ಕಟ್ಟಡ ನಿರ್ಮಾಣ ಮೇಸ್ತ್ರಿಯಾಗಿದ್ದ ದಾದಾಪೀರ್ ಕೊಲ್ಕರ್ (38) ಎಂದು ಗುರುತಿಸಲಾಗಿದೆ. ಅವರ ಬಳಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕ ಅಜೀಂ ಜಮಖಾನೆ ಕೊಲೆ ಆರೋಪಿಯಾಗಿದ್ದಾನೆ.
ಮೂಲಗಳ ಪ್ರಕಾರ, ಆರೋಪಿ ಅಜೀಂ ಇತ್ತೀಚೆಗೆ ತನ್ನ ಮೇಸ್ತ್ರಿ ದಾದಾಪೀರ್ ಬಳಿ ಹೊಸ ಮೊಬೈಲ್ ಕೊಡಿಸುವಂತೆ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಆದರೆ ಈ ಹಿಂದೆ ನೀಡಿದ್ದ ₹25 ಸಾವಿರ ಹಣವನ್ನು ಇನ್ನೂ ಹಿಂದಿರುಗಿಸಿಲ್ಲ, ಜೊತೆಗೆ ಕೆಲಸಕ್ಕೂ ಸರಿಯಾಗಿ ಬರುತ್ತಿಲ್ಲ ಎಂದು ಮೇಸ್ತ್ರಿ ಆತನಿಗೆ ಬುದ್ಧಿವಾದ ಹೇಳಿದ್ದಾರೆ.
ಈ ವಿಚಾರಕ್ಕೆ ತೀವ್ರ ಆಕ್ರೋಶಗೊಂಡ ಅಜೀಂ, ರೇವಡಿಹಾಳ ಗ್ರಾಮದ ಬಳಿ ಒಂಟಿಯಾಗಿ ಸಿಕ್ಕ ದಾದಾಪೀರ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ತಲೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ದಾದಾಪೀರ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಹುಬ್ಬಳ್ಳಿ ರೂರಲ್ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕ್ಷಣಿಕ ಕೋಪ ಹೇಗೆ ಭೀಕರ ದುರಂತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

