ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದಲ್ಲಿ ಜಲ ಸಂರಕ್ಷಣೆಯ ಕುರಿತು ಕಾರ್ಯಗಾರ

0
114

ಕೊಣಾಜೆ : ಸಮೃದ್ಧವಾದ ಪರಿಸರ ಮನುಷ್ಯನ ಒಳಿತಿಗಾಗಿ ಬಹಳಷ್ಟು ಕೊಡುಗೆಗಳನ್ನು ನೀಡುತ್ತಿವೆ. ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಬಹು ಮುಖ್ಯ ಜವಾಬ್ದಾರಿ ಎಂದು ಮಂಗಳೂರಿನ ಗೀವ್ ಗ್ರೀನ್ ಸೊಲ್ಯೂಷನ್ ನ ಯೋಜನಾ ಸಲಹೆಗಾರರಾದ ಜೀತ್ ಮಿಲನ್ ರೋಚೆ ಅಭಿಪ್ರಾಯಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡಾ ಚೇರ್ ಮತ್ತು ವಾಣಿಜ್ಯ ಸಂಘದ ಸಂಯೋಜನೆಯೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಲ ಸಂರಕ್ಷಣೆಯ ಕುರಿತು ನಡೆದ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು.

ನೀರು ನಮ್ಮ ಬದುಕಿನ ಮೂಲ, ಪ್ರಕೃತಿಯ ಅಮೂಲ್ಯ ಕೊಡುಗೆ. ಮನುಷ್ಯ, ಪ್ರಾಣಿ, ಮರ ಗುಡ್ಡೆ ಎಲ್ಲರಿಗೂ ನೀರು ಅಗತ್ಯ. ಆದರೆ, ಇಂದು ನಾವು ಕಂಡುಕೊಳ್ಳುತ್ತಿರುವ ಸಮಸ್ಯೆ ಬಹಳ ಭೀಕರವಾಗಿದೆ. ಬಗೆಬಗೆಯ ಮಾಲಿನ್ಯ, ಅಕ್ರಮ ನೀರಿನ ಬಳಕೆ, ಅಣಕು ಭೂಮಿ, ಮಳೆ ಕೊರತೆ ಈ ಎಲ್ಲವೂ ನೀರಿನ ಕೊರತೆಯ ಪ್ರಮುಖ ಕಾರಣಗಳಾಗಿವೆ.

ಒಂದು ಅಧ್ಯಯನದ ಪ್ರಕಾರ, ಮುಂದಿನ ತಲೆಮಾರಿಗೆ ಶುದ್ಧ ಕುಡಿಯುವ ನೀರು ಸಿಗುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು. ಇದನ್ನು ತಪ್ಪಿಸಲು ನಾವು ಇವತ್ತಿನಿಂದಲೇ ಎಚ್ಚರಿಕೆ ವಹಿಸಬೇಕಾಗಿದೆ. ಸಾಧ್ಯವಾದಷ್ಟು ಕಡಿಮೆ ನೀರಿನ ಬಳಕೆ, ಹೊಂಡದಲ್ಲಿ ನೀರು ಸಂಗ್ರಹಿಸುವುದು, ಮಳೆನೀರಿನ ಸಂಗ್ರಹಣೆ , ತ್ಯಾಜ್ಯ ನೀರನ್ನು ಶುದ್ಧಗೊಳಿಸಿ ಪುನಃ ಉಪಯೋಗಿಸುವುದು ಮಾಡಬಹುದು.
ನಮ್ಮ ಮನೆಯಲ್ಲಿಯೇ ನೀರಿನ ವೈಫಲ್ಯವನ್ನು ತಡೆಯುವಷ್ಟು ನಾವು ಜಾಗರೂಕರಾಗಬೇಕಿದೆ. ಪ್ರತಿಯೊಬ್ಬರೂ ಕೇವಲ ಒಂದು ಲೋಟ ನೀರನ್ನು ದಿನವೂ ಉಳಿಸಿಕೊಂಡರೂ, ಒಂದು ವರ್ಷದಲ್ಲಿ ಸಾವಿರಾರು ಲೀಟರ್ ನೀರನ್ನು ಉಳಿಸಬಹುದಾಗಿದೆ.

ಶುದ್ಧವಾದ ಗಾಳಿ, ನೀರು ಮತ್ತು ಆಹಾರವನ್ನು ಸೇವಿಸುವುದು ಹಾಗೂ ದೊರಕುವಂತೆ ನಾವೆಲ್ಲರೂ ಜಾಗೃತರಾಗಬೇಕು. ಮುಖ್ಯವಾಗಿ ನೀರು ಪೋಲಾಗದಂತೆ ನೋಡಿಕೊಳ್ಳುವುದು ಮತ್ತು ಗಿಡಮರಗಳನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಇಂದಿನ ಯುವಜನತೆಯಲ್ಲಿ ಪರಿಸರ ಪ್ರಜ್ಞೆ, ಸ್ವಚ್ಛತೆ ವಾತಾವರಣದ ಕಲ್ಪನೆಯನ್ನು ಮೂಡಿಸಬೇಕು ಎಂದು ಹೇಳಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಈಶ್ವರ ಪಿ. ಮತ್ತು ಡಾ. ವೇದವ ಪಿ. ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ರಶ್ಮಿತಾ ಆರ್. ಕೋಟ್ಯಾನ್, ಸಿ. ಲಹರಿ, ಮತ್ತು ರಮ್ಯ ರಾಮಚಂದ್ರ ನಾಯ್ಕ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.
ಸ್ವಾಗತ ಭಾಷಣವನ್ನು ಅಂತಿಮ ಎಂ.ಕಾಂ. ವಿಭಾಗದ ವಿದ್ಯಾರ್ಥಿಗಳಾದ ಸುಶ್ಮಿತಾ ಮಾಡಿದ್ದರೆ, ವಂದನೆಯನ್ನು ಜಯಶ್ರೀ ಗೈದರು. ಕಾರ್ಯಕ್ರಮದ ನಿರ್ವಹಣೆಯನ್ನು ಸ್ವಾತಿ ಕೆ. ಎಸ್. ನಿರೂಪಿಸಿದರು.

LEAVE A REPLY

Please enter your comment!
Please enter your name here