ಉಡುಪಿ : ಜಗತ್ತಿನ ಕ್ಷೇಮಕ್ಕಾಗಿ ಕೃಷ್ಣ ಆರಾಧನೆ ನಡೆಯುತ್ತಿದೆ. ಎಷ್ಟೇ ಒಳ್ಳೆ ಸರ್ಕಾರವಿದ್ದರೂ ದೇಶ ಮುನ್ನಡೆಸಲು ದೈವಾನುಗ್ರಹ ಅಗತ್ಯ. ಯುವ ಯತಿಗೆ ಕೃಷ್ಣ ಪೂಜೆ ಜವಾಬ್ದಾರಿ ವಹಿಸುತ್ತಿರುವುದು ಸಂತೋಷ ಸಂಗತಿ. ಸ್ವಾಮೀಜಿಗಳು ನಿಮಿತ್ತ ಮಾತ್ರ. ಭಕ್ತರೇ ಎಲ್ಲ ಕಾರ್ಯಗಳನ್ನು ಮುನ್ನಡೆಸುತ್ತಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ರಥಬೀದಿಯಲ್ಲಿ ಪೇಜಾವರ ಮಠದ ಮುಂಭಾಗ ಪೂರ್ಣಪ್ರಜ್ಞ ವೇದಿಕೆಯಲ್ಲಿ ನಗರಸಭೆ ವತಿಯಿಂದ ನಡೆದ ಭಾವಿ ಪರ್ಯಾಯ ಶ್ರೀರೂರು ಸ್ವಾಮೀಜಿಯವರ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ವಾದಿರಾಜರಿಂದ ಪರಿಸ್ಕೃತ ವ್ಯವಸ್ಥೆ 500 ವರ್ಷದಿಂದ ಪರ್ಯಾಯ ಪದ್ಧತಿ ಅಪೂರ್ವವಾದದ್ದು ಯಾವುದೇ ಗಡಿಬಿಡಿ ಇಲ್ಲದೆ ಅಧಿಕಾರ ಹಸ್ತಾಂತರ ನಡೆಯುತ್ತದೆ. ಸರಿಯಾಗಿ 2 ವರ್ಷಕ್ಕೆ ಜವಾಬ್ದಾರಿ ಬಿಟ್ಟು ಕೊಡುತ್ತಾರೆ. ದೇಶಕ್ಕೆ ಮಾದರಿ ವ್ಯವಸ್ಥೆ ಎಂದರು.
ವೇದಾವರ್ಧನರು ಉಡುಪಿ ಆಶಾಕಿರಣ
ಬಾಲಕೃಷ್ಣ ಬಾಲಕನಾಗಿ ಪೂಜೆ ಮಾಡುವ ಅಪೂರ್ವ ಅವಕಾಶಗಳಿಗೆ ಶ್ರೀಗಳಿಗೆ ಬಂದಿದೆ. ವೇದವರ್ಧನರು ವೇಗವರ್ಧನರಾಗಿದ್ದಾರೆ. ಉಡುಪಿ ಕ್ಷೇತ್ರದ ಅಭಿವೃದ್ಧಿ ವೇಗ ಪಡೆಯಲಿ. ವೇದಾವರ್ಧನರು ಉಡುಪಿ ಆಶಾಕಿರಣ. ನಮ್ಮ ಪಟ್ಟದ ದೇವರು ವಿಠಲನಿಂದ ಶೀರೂರು ಮಠದ ಪಟ್ಟದ ದೇವರಾದ ವಿಠಲ ದೇವರಿಗೆ ಕೃಷ್ಣ ಮಠದ ಜವಾಬ್ದಾರಿ ಹಸ್ತಾಂತರ. ಶಿರೂರು ಮಠಕ್ಕೂ ಪುತ್ತಿಗೆ ಮಠಕ್ಕೆ ಸಹೋದರ ಸಂಬಂಧವಿದೆ. 300 ವರ್ಷದ ಹಿಂದೆ ಪುತ್ತಿಗೆ ಮಠದ ಶ್ರೀಗಳ ಸಹೋದರ ಶೀರೂರು ಮಠದ ಸ್ವಾಮಿಗಳಾಗಿದ್ದರು. ಪುತ್ತಿಗೆ ಮೂಲಮಠದಲ್ಲಿ ಅವರ ಬೃಂದಾವನ ಇದೆ. ಶಿರೂರು ಸ್ವಾಮೀಜಿ ಬಹಳಷ್ಟು ಕಿರಿಯರಾಗಿರುವುದರಿಂದ ನಾಲ್ಕು ಪರ್ಯಾಯಗಳನ್ನು ನಡೆಸುವ ಅವಕಾಶವಿದೆ ಎಂದು ಹೇಳಿದರು
ಮೋದಿ ಬಂದು ಹೋದ ಮೇಲೆ ಉತ್ತರ ಭಾರತದಿಂದ ಯಾತ್ರೀಕರ ಸಂಖ್ಯೆ ಹೆಚ್ಚುತ್ತಿದ್ದಾರೆ. ಭಕ್ತರ ಸಂದಣಿ ದುಪ್ಪಟ್ಟು ಆಗಿದೆ. ಉಡುಪಿ ಪ್ರವರ್ಧಮಾನ ಕ್ಷೇತ್ರವಾಗುತ್ತಿದೆ ಎಂದರು.
ಭಾವಿ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಮಾತನಾಡಿದರು. ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ ಸ್ಮರೂಪಾ ಟಿ.ಕೆ, ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ ಮುಂತಾದವರು ಉಪಸ್ಥಿತರಿದ್ದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್ಯ ಅಭಿನಂದನೆ ಭಾಷಣ ಮಾಡಿದರು. ನಗರಸಭಾ ಪೌರಯುಕ್ತ ಮಹಾಂತೇಶ ಹಂಗರಗಿ ಸ್ವಾಗತಿಸಿದರು.
ವಿವಿಧ ಸಂಘ-ಸಂಸ್ಥೆ ಮತ್ತು ಸಾರ್ವಜನಿಕರಿಂದ ಶ್ರೀಗಳು ಸಮ್ಮಾನವನ್ನು ಸ್ವೀಕರಿಸಿದರು. ಪೌರ ಸಮ್ಮಾನದ ವೇದಿಕೆಯಲ್ಲಿ ಜ. 17 ರವರೆಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶಿರೂರು ಮಠ ಪ್ರವೇಶ
ಕಡಿಯಳಿಯಿಂದ ಸರ್ವಿಸ್ ಬಸ್ ನಿಲ್ದಾಣ ತ್ರಿವೇಣಿ ಸರ್ಕಲ್ ಮಾರ್ಗವಾಗಿ ಕನಕದಾಸ ರಸ್ತೆಯ ಮೂಲಕ ಶಿರೂರು ಸ್ವಾಮೀಜಿಗಳ ಪುರ ಪ್ರವೇಶ ಮೆರವಣಿಗೆ ರಥ ಬೀದಿ ಪ್ರವೇಶಿಸಿತು. ಗೋಧೂಲಿ ಲಗ್ನದಲ್ಲಿ ರಥಬೀದಿ ಪ್ರವೇಶಿಸಿದ ಶೀರೂರು ಶ್ರೀಗಳು ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದು ಆ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ದರ್ಶನ ಪಡೆದರು. ಪರ್ಯಾಯ ಪುತ್ತಿಗೆ ಮಠದ ಸುಗುನೇಂದ್ರ ತೀರ್ಥ ಸ್ವಾಮೀಜಿಯವರು ದ್ವಾರದಲ್ಲಿ ಶೀರೂರು ಶ್ರೀಗಳನ್ನು ಕೃಷ್ಣ ಮಠಕ್ಕೆ ಸ್ವಾಗತಿಸಿ ಶ್ರೀ ಕೃಷ್ಣ ಮುಖ್ಯ ಪ್ರಾಣದೇವರ ದರ್ಶನ ಮಾಡಿಸಿದರು. ನಂತರ ಸುಮುರ್ತದಲ್ಲಿ ಪಟ್ಟದ ದೇವರೊಂದಿಗೆ ಶಿರೂರು ಮಠ ಪ್ರವೇಶಿಸಿದರು.

