ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ (ರಿ.), ಮುಂಬಯಿ ವತಿಯಿಂದ ‘ರಜತ ಪರ್ವ’ ಯಕ್ಷಗಾನ ಸಮ್ಮೇಳನ–2026 ಆಯೋಜಿಸಲಾಗಿದೆ. ಅಕ್ಟೋಬರ್ 3 ಮತ್ತು 4ರಂದು ಎರಡು ದಿನಗಳ ಕಾಲ ಸಮ್ಮೇಳನ ನಡೆಯಲಿದೆ.
ಮುಂಬಯಿ ಯಕ್ಷಗಾನ ಸಮ್ಮೇಳನ–2026ಕ್ಕೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿರುವ ಕಲ್ಲಾಡಿ ವಿಠಲ ಶೆಟ್ಟಿ ಪ್ರಾಂಗಣ ವೇದಿಕೆಯಾಗಲಿದೆ. ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಮುಂಬಯಿ ನಗರದಲ್ಲಿ ಪರಿಚಯಿಸುವ ಹಾಗೂ ಕಲಾಭಿಮಾನಿಗಳನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಜೆಕಾರು ಕಲಾಭಿಮಾನಿ ಬಳಗದ ರಜತ ಪರ್ವದ ಅಂಗವಾಗಿ ನಡೆಯಲಿರುವ ಸಮ್ಮೇಳನದಲ್ಲಿ ಯಕ್ಷಗಾನ ಕಲಾವಿದರು, ಕಲಾಭಿಮಾನಿಗಳು ಹಾಗೂ ಮುಂಬಯಿ ನಗರದಲ್ಲಿರುವ ಕರಾವಳಿ ಭಾಗದ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಎರಡು ದಿನಗಳ ಕಾಲ ಯಕ್ಷಗಾನಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಸಮ್ಮೇಳನದ ಗೌರವಾಧ್ಯಕ್ಷರಾಗಿ ಡಾ. ಕನ್ಯಾನ ಸದಾಶಿವ ಶೆಟ್ಟಿ, ಸಮ್ಮೇಳನಾಧ್ಯಕ್ಷರಾಗಿ ಡಾ. ಟಿ. ಶ್ಯಾಮ ಭಟ್, ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷರಾಗಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ.
ಯಕ್ಷಗಾನ ಕಲೆಯ ಸಂರಕ್ಷಣೆ, ಪ್ರೋತ್ಸಾಹ ಹಾಗೂ ಪ್ರಸರಣಕ್ಕೆ ವೇದಿಕೆಯಾಗಲಿರುವ ಈ ಸಮ್ಮೇಳನಕ್ಕೆ ಯಕ್ಷಗಾನ ಕಲಾಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರಿಗೆ ಸರ್ವರಿಗೂ ಆದರದ ಸ್ವಾಗತವನ್ನು ಆಯೋಜಕರು ಕೋರಿದ್ದಾರೆ.

