ಮಂಗಳೂರು : ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಗ್ರೀನ್ ಗ್ರೌಂಡ್ ಬಳಿ ಸೆ.24ರಂದು ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಕುದ್ರೋಳಿ ರಹ್ಮತ್ ನಗರದ ಅಫೀಝ್ (26) ಹಾಗೂ ಎಮ್ಮೆಕೆರೆ ನಿವಾಸಿ ಆಸಿಫ್ (26) ಅವರನ್ನು ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಕಾಟಿಪಳ್ಳ ಕೃಷ್ಣಾಪುರದ 8ನೇ ಎ ಬ್ಲಾಕ್ ರಸ್ತೆಯ ಅಂಬೇಡ್ಕರ್ ಭವನದ ಬಳಿ ಮಾದಕ ವಸ್ತು ಬೆರೆಸಿದ ಸಿಗರೇಟು ಸೇದುತ್ತಿದ್ದ ಆರೋಪದಲ್ಲಿ ಜಗದೀಶ್ (32) ಹಾಗೂ ಆತೀಶ್ ಪೂಜಾರಿ (29) ಅವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ಪ್ರಕರಣದಲ್ಲಿ ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಪಿಝಾ ಗ್ರೌಂಡ್ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಬಜಾಲ್ ನಂತೂರಿನ ಮುಸ್ತಫ (24) ಹಾಗೂ ಪಡೀಲ್ ವೀರನಗರದ ಅಬ್ದುಲ್ ಶಾಖೀರ್ (24) ಅವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

