ಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಅಮೃತ ಮಹೋತ್ಸವದ ಪ್ರಯುಕ್ತ ಯಕ್ಷಗಾನ ಸಪ್ತಾಹದ ಉದ್ಘಾಟನೆಯು ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಜರಗಿತು.
ಪರ್ಯಾಯ ಶ್ರೀ ಶ್ರೀರೂರು ಮಠದ ದಿವಾನರಾದ ಡಾ|ಉದಯ್ ಕುಮಾರ್ ಸರಳತ್ತಾಯರು ದೀಪ ಬೆಳಗಿಸುವುದರ ಮೂಲಕ ಸಪ್ತಾಹ ಉದ್ಘಾಟಿಸಿದರು.

ಯಕ್ಷಗಾನ ಕಲೆಯ ತವರೂರು ಉಡುಪಿ ಯಾಗಿದೆ, ಮಠಗಳ ಸಹಕಾರದಿಂದ ಸದಾಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಸಾಂಸ್ಕೃತಿಕ ನಗರಿ ಎಂಬ ಖ್ಯಾತಿಗೆ ಉಡುಪಿ ಪಾತ್ರವಾಗಿದೆ. ಎಪ್ಪತ್ತೈದು ವರ್ಷ ಪೂರೈಸಿದ ಕಲಾಕ್ಷೇತ್ರವು ಮುಂದೆ ಶತಮಾನೋತ್ಸವದ ಸಂಭ್ರಮವನ್ನು ರಾಜಾಂಗಣದಲ್ಲಿಯೇ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಪ್ರಸಾದರಾಜ್ ಕಾಂಚನ್ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಲಾಕ್ಷೇತ್ರವು ಯಕ್ಷಗಾನ ಸಂಘಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಸಭಾಧ್ಯಕ್ಷತೆಯನ್ನು ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ವಹಿಸಿದರು.
ಅಧ್ಯಕ್ಷ ಕೇಶವಮೂರ್ತಿ ಬಿಲ್ಪತ್ರೆ ಪ್ರಸ್ತಾವನೆಗೈದರು, ವಿಷ್ಣುಮೂರ್ತಿ ಉಪಾಧ್ಯ ನಿರೂಪಿಸಿ, ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು. ಹಿರಿಯ ಸದಸ್ಯರಾದ ನಾಗರಾಜ ಉಪಾಧ್ಯ, ಡಾ. ರಮೇಶ್ ಬೆಂಬಾಳ್ಕರ್, ಕೋಶಾಧಿಕಾರಿ ನರಸಿಂಹ ಎನ್. ಆರ್ ಸಹಕರಿಸಿದರು. ನಂತರ ಯಕ್ಷಗಾನ ಪ್ರದರ್ಶನ ನೆಡೆಯಿತು.

