ಮಂಗಳೂರು : ಮಾದಕ ವಸ್ತು ಬೆರೆಸಿದ ಸಿಗರೇಟು ಸೇವನೆ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಯ್ಗೆ ಬಜಾರ್ ನಿವಾಸಿ ಪ್ರಥಮ್ ಕೋಟಿಯಾನ್ ಬಂಧಿತ ಆರೋಪಿ. ಬುಧವಾರ ರಾತ್ರಿ ಗಸ್ತಿನಲ್ಲಿದ್ದ ವೇಳೆ ಬಿಜೈ ಕಾಪಿಕಾಡ್ ಆನೆಗುಂಡಿ ರಸ್ತೆಯಲ್ಲಿ ಸಿಗರೇಟ್ ಸೇದುತ್ತ ನಿಂತಿದ್ದ ಯುವಕನನ್ನು ಪೊಲೀಸರು ಗಮನಿಸಿದ್ದಾರೆ.
ಪೊಲೀಸರು ಸಮೀಪಿಸುತ್ತಿದ್ದಂತೆ ಆತ ಸಿಗರೇಟನ್ನು ಚರಂಡಿಗೆ ಎಸೆದಿದ್ದಾನೆ. ಅನುಮಾನಗೊಂಡು ವಿಚಾರಣೆ ನಡೆಸಿದಾಗ ಮಾದಕ ವಸ್ತು ಬೆರೆಸಿ ಸಿಗರೇಟು ಸೇವನೆ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಸಂಬಂಧ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

