ಮೂಡುಬಿದಿರೆ: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅ.4ರಂದು ಯುವವಾಹಿನಿ ಕ್ರೀಡೋತ್ಸವ ನಡೆಯಲಿದೆ.
ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಕ್ರೀಡಾಂಗಣದಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕ್ರೀಡೋತ್ಸವ ಆಯೋಜಿಸಲಾಗಿದೆ. ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ನಡೆಯಲಿದ್ದು, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಕ್ರೀಡಾಜ್ಯೋತಿ ಆಗಮನ ಹಾಗೂ ಪಥಸಂಚಲನ ನಡೆಯಲಿದೆ.
ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಐಎನ್‌ಎಸ್ ವಿಕ್ರಮಾದಿತ್ಯದ ಮುಖ್ಯ ವೈದ್ಯಕೀಯ ಅಧಿಕಾರಿ ಸರ್ಜನ್ ಕಮಾಂಡರ್ ಡಾ. ಅರ್ಜುನ್ ಅಂಚನ್ ಧ್ವಜವಂದನೆ ಸ್ವೀಕರಿಸಲಿದ್ದಾರೆ. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ ಅಭಯ ಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಮಿಥುನ್ ರೈ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಕ್ರೀಡೋತ್ಸವದಲ್ಲಿ 18ರಿಂದ 35, 35ರಿಂದ 50 ಹಾಗೂ 50ರಿಂದ 60 ವರ್ಷ ಮೇಲ್ಪಟ್ಟವರ ಪ್ರತ್ಯೇಕ ವಿಭಾಗಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ವಿವಿಧ ವೈಯಕ್ತಿಕ ಸ್ಪರ್ಧೆಗಳು ನಡೆಯಲಿವೆ. 100 ಮೀ., 200 ಮೀ., 4×100 ಮೀ. ಓಟ, ಗುಂಡೆಸೆತ ಹಾಗೂ ವೇಗದ ನಡಿಗೆ ಸ್ಪರ್ಧೆಗಳು ಆಯೋಜಿಸಲಾಗಿದೆ. ಗುಂಪು ಸ್ಪರ್ಧೆಗಳಲ್ಲಿ ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ ನಡೆಯಲಿದೆ. ಆಕರ್ಷಕ ಪಥಸಂಚಲನವೂ ಕ್ರೀಡೋತ್ಸವದ ವಿಶೇಷತೆಯಾಗಲಿದೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಲಿದ್ದು, ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಡಿಸ್ಟ್ರಿಕ್ಟ್ ಗವರ್ನರ್ ಸತೀಶ್ ಬೋಳಾರ್ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ಕಬಡ್ಡಿ ವಿಶ್ವಕಪ್ ಚಿನ್ನದ ಪದಕ ವಿಜೇತೆ ಧನಲಕ್ಷ್ಮೀ ಪೂಜಾರಿ ಅವರನ್ನು ಕಾರ್ಯಕ್ರಮದಲ್ಲಿ ಗೌರವ ಅಭಿನಂದನೆ ಸಲ್ಲಿಸಲಾಗುವುದು. ಯುವವಾಹಿನಿ ಮೂಡುಬಿದಿರೆ ಘಟಕದ ಕ್ರೀಡಾ ನಿರ್ದೇಶಕ ಪ್ರಸಾದ್ ಸುವರ್ಣ, ಕಾರ್ಯದರ್ಶಿ ಮೇಘನಾ, ಕ್ರೀಡಾ ನಿರ್ದೇಶಕ ಶಂಕರ್ ಎ. ಕೋಟ್ಯಾನ್ ಸೇರಿದಂತೆ ಕೇಂದ್ರ ಹಾಗೂ ಘಟಕದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.

