ಹಿರ್ಗಾನ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಹಿರ್ಗಾನ ಇವರಿಂದ 2007ರಲ್ಲಿ ಆರಂಭಗೊಂಡಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ 20ನೇ ವರ್ಷದ ಆಚರಣೆ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿಯಂದು ಹಿರ್ಗಾನ ಗ್ರಾಮದ ಮೂರೂರಿನ ನಡೆಯಲಿದೆ.
ಶ್ರೀ ಕ್ಷೇತ್ರ ಕುಂದೇಶ್ವರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಕೃಷ್ಣ ರಾಜೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.13ರಂದು ವಿವಿಧ ಸ್ಪರ್ಧೆಗಳು
ಸೆಪ್ಟೆಂಬರ್ 13ರಂದು ಮಧ್ಯಾಹ್ನ 3 ಗಂಟೆಯಿಂದ ಭಕ್ತಿಗೀತೆ, ದೇಶಭಕ್ತಿಗೀತೆ, ಶ್ರೀ ಗಣಪತಿ ದೇವರ ಚಿತ್ರ ಬಿಡಿಸುವಿಕೆ ಹಾಗೂ ಭಾಷಣ ಸ್ಪರ್ಧೆ ನಡೆಯಲಿದೆ. ಭಾಷಣ ಸ್ಪರ್ಧೆಗೆ ‘ರಾಷ್ಟ್ರೀಯ ಜಾಗೃತಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪಾತ್ರ’ ಎಂಬ ವಿಷಯವನ್ನು ನೀಡಲಾಗಿದೆ.
ಸಂಜೆ 5.30ಕ್ಕೆ ಎಣ್ಣೆಹೊಳೆಯಿಂದ ಶ್ರೀ ದೇವರ ವಿಗ್ರಹದ ಆಗಮನ ನಡೆಯಲಿದ್ದು, ಬಳಿಕ ಫಲಾಹಾರ ಹಾಗೂ ಸ್ಪರ್ಧೆಗಳು ಮುಂದುವರಿಯಲಿವೆ. ರಾತ್ರಿ 7.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಸೆ.14ರಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
ಗಣೇಶ ಚತುರ್ಥಿಯಂದು ಬೆಳಿಗ್ಗೆ 7.30ಕ್ಕೆ ಪ್ರತಿಷ್ಠಾ ಪೂಜೆ ಹಾಗೂ ಸಾಮೂಹಿಕ ಭಜನಾ ಸೇವೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 10.30ರಿಂದ ಪಿಲಿ ನಲಿಕೆ–ಊದು ಪೂಜೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ದಿ. ರಾಮಕೃಷ್ಣ ಕಡಂಬ, ದಿ. ಸುಂದರ ಪೂಜಾರಿ ಗುಂಡ್ಯಡ್ಕ ಹಾಗೂ ದಿ. ಶಂಕರ ಎರ್ಮಾಳ್ ಅವರ ಸ್ಮರಣಾರ್ಥ ಹಗ್ಗಜಗ್ಗಾಟ, ಮಡಕೆ ಒಡೆಯುವುದು, ಭಾರ ಎತ್ತುವುದು ಹಾಗೂ ವಿವಿಧ ಮೋಜಿನಾಟಗಳ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.
‘ಪಂಚವಟಿ’ ಯಕ್ಷಗಾನ ಪ್ರದರ್ಶನ
ದಿ. ಕಾಬೆಟ್ಟು ಕೃಷ್ಣದಾಸ್ ಶೆಣೈ ಸಾಂಸ್ಕೃತಿಕ ವೇದಿಕೆಯಲ್ಲಿ ಮಧ್ಯಾಹ್ನ 12.30ರಿಂದ ಶ್ರೀ ದತ್ತ ಯಕ್ಷಗಾನ ಕಲಾಮಂಡಳಿ, ಶ್ರೀ ದತ್ತ ಮಂದಿರ, ನೆಲ್ಲಿಕಟ್ಟೆ ಇವರಿಂದ ‘ಪಂಚವಟಿ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಯಕ್ಷಗುರು ಸತೀಶ ಮಡಿವಾಳ, ಕಾರ್ಕಳ ನಿರ್ದೇಶನದಲ್ಲಿ ನಡೆಯಲಿರುವ ಯಕ್ಷಗಾನಕ್ಕೆ ಶ್ರೀ ಮಹಾಗಣಪತಿ ಯಕ್ಷಗಾನ ಕೇಂದ್ರ, ಕಾರ್ಕಳ ವೇಷಭೂಷಣ ಒದಗಿಸಲಿದೆ.
ಧಾರ್ಮಿಕ ಸಭೆ ಹಾಗೂ ಬಹುಮಾನ ವಿತರಣೆ
ಅಪರಾಹ್ನ 2.30ಕ್ಕೆ ಧಾರ್ಮಿಕ ಸಭೆ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸೇವಾಕರ್ತರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.
ಕೃಷ್ಣ ರಾಜೇಂದ್ರ ಭಟ್ ಆಶೀರ್ವಚನ ನೀಡಲಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್, ಹಿರ್ಗಾನ ಅಧ್ಯಕ್ಷ ರಾಮಕೃಷ್ಣ ತೆಂಡುಲ್ಕರ್, ಬೊಮ್ಮನ್‌ಜಡ್ಡು ಅಧ್ಯಕ್ಷತೆ ವಹಿಸಲಿದ್ದಾರೆ. ಬಜರಂಗದಳ ಉಡುಪಿ ಜಿಲ್ಲಾ ಸಂಯೋಜಕ ಚೇತನ್ ಪೇರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಸಂಜೆ 4.15ಕ್ಕೆ ಮಹಾಪೂಜೆ, 4.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಶ್ರೀ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 7 ಗಂಟೆಗೆ ಜಲಸ್ತಂಭನ ಹಾಗೂ ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತೀರ್ಥ ಪ್ರಸಾದ ಸ್ವೀಕರಿಸಿ ಹಾಗೂ ತನು–ಮನ–ಧನಗಳಿಂದ ಸಹಕರಿಸುವಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಹಿರ್ಗಾನ ಮನವಿ ಮಾಡಿದೆ.

