ಮುಲ್ಕಿ : ಹಳೆಯಂಗಡಿ ಸಮೀಪದ ಇಂದಿರಾ ನಗರ ರೈಲ್ವೇ ಗೇಟ್ ಬಳಿ ರೈಲು ಬರುವ ಹೊತ್ತಿನಲ್ಲಿ ಏಕಾಏಕಿ ಗೇಟ್ ಕ್ರಾಸ್ ಮಾಡಲು ಯತ್ನಿಸಿದ ಇಬ್ಬರು ಒರಿಸ್ಸಾ ಮೂಲದ ಕಾರ್ಮಿಕರ ಪೈಕಿ ಓರ್ವ ರೈಲು ಡಿಕ್ಕಿ ಹೊಡೆದು ಮೃತ ಪಟ್ಟಿದ್ದು ಇನ್ನೋರ್ವ ಪವಾಡ ಸದೃಶ ಪಾರಾಗಿದ್ದಾನೆ.
ಗಾಯಾಳುವನ್ನು ಒರಿಸ್ಸಾ ಮೂಲದ ಅಟೀಸ್ ಸಾಹು ಅಲಿಯಾಸ್ ಜಗ(42)ಎಂದು ಗುರುತಿಸಲಾಗಿದೆ. ಮೃತ ಜಗ ಮತ್ತು ಇನ್ನೋರ್ವ ಕಾರ್ಮಿಕ ಕೈಲಾಸ್ ಎಂಬಾತ ಪಡು ಪಣಂಬೂರು ಟಿ ಎ ಬೋರ್ಡ್ ನಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದು ಸೋಮವಾರ ಸಂಜೆ 5 ಗಂಟೆ ಬಳಿಕ ಕೆಲಸ ಮುಗಿಸಿ, ಮಧ್ಯ ಸೇವಿಸಿ ನಡೆದುಕೊಂಡು ಹಳೆಯಂಗಡಿಯ ಇಂದಿರಾ ನಗರ ರೈಲ್ವೇ ಗೇಟ್ ಬಳಿ ರೈಲು ಬರುವ ಹೊತ್ತಿನಲ್ಲಿ ರೈಲ್ವೇ ಗೇಟ್ ಹಾಕಿರುವುದನ್ನು ಗಮನಿಸಿ ಕೂಡ ಎಚ್ಚರಿಕೆಯನ್ನು ಲೆಕ್ಕಿಸದೆ ತರಾತುರಿಯಲ್ಲಿ ನಡೆದುಕೊಂಡು ಗೇಟ್ ಕ್ರಾಸ್ ಮಾಡಲು ಯತ್ನಿಸಿದಾಗ ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ.

ಈ ಸಂದರ್ಭ ಇಬ್ಬರು ಕಾರ್ಮಿಕರ ಪೈಕಿ ಜಗ ರೈಲು ಡಿಕ್ಕಿ ಹೊಡೆದು ಮೃತಪಟ್ಟರೆ, ಕೈಲಾಶ್ ಪವಾಡ ಸದೃಶ ಪಾರಾಗಿದ್ದಾನೆ ಘಟನೆಯಿಂದ ರೈಲ್ವೆ ಗೇಟ್ ಬಳಿ ಸಂಚಾರ ಅಸ್ತವ್ಯಸ್ತಗೊಂಡಿತು ಕೂಡಲೇ ಸ್ಥಳೀಯರ ನೆರವಿನಿಂದ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಸ್ಥಳದಿಂದ ತೆರವುಗೊಳಿಸಲಾಯಿತು.

