ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 20ನೇ ವರ್ಷದ ‘ಓಣಂ @ ಪ್ರಗತಿ–2026’

0
4

ಪುತ್ತೂರು : ಕೇರಳದ ಸಾಂಸ್ಕೃತಿಕ ಪರಂಪರೆ, ಸಮೃದ್ಧಿ, ಸಮಾನತೆ ಹಾಗೂ ಸಹಬಾಳ್ವೆಯ ಸಂಕೇತವಾಗಿರುವ ಓಣಂ ಹಬ್ಬವನ್ನು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ ಶಿಕ್ಷಣ ಸಂಸ್ಥೆಯಲ್ಲಿ ‘ಓಣಂ @ ಪ್ರಗತಿ–2026 – Spirit of Togetherness’ ಎಂಬ ಶೀರ್ಷಿಕೆಯಡಿ ಆಗಸ್ಟ್ 26ರಂದು ಅದ್ದೂರಿಯಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸುವುದು, ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವುದು ಹಾಗೂ ಪರಸ್ಪರ ಸಹೋದರತ್ವದ ಭಾವನೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮವು ಸಂಭ್ರಮ, ಸಡಗರ ಹಾಗೂ ಸಾಂಸ್ಕೃತಿಕ ವೈಭವದ ಸಂಗಮವಾಗಿತ್ತು.

ಸಾಂಪ್ರದಾಯಿಕ ಪೂಕಳಂ ಅಲಂಕಾರದ ನಡುವೆ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ತರಗತಿವಾರು ಪೂಕಳಂ ಸ್ಪರ್ಧೆ ಆಯೋಜಿಸಲಾಗಿದ್ದು, ವಿವಿಧ ತರಗತಿಗಳ ವಿದ್ಯಾರ್ಥಿಗಳು ಬಣ್ಣಬಣ್ಣದ ಹೂಗಳನ್ನು ಬಳಸಿ ಕಲಾತ್ಮಕ ಹಾಗೂ ಆಕರ್ಷಕ ಪೂಕಳಂಗಳನ್ನು ರಚಿಸಿ ಗಮನ ಸೆಳೆದರು.

ಓಣಂ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಓಣಂ ಸದ್ಯ ಏರ್ಪಡಿಸಲಾಗಿತ್ತು. ಬಳಿಕ ನಡೆದ ಓಣಂ ವಿಶೇಷ ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಓಣಂ ಹಬ್ಬದ ಮಹತ್ವ, ಭಾರತೀಯ ಹಬ್ಬಗಳು ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ರಸಪ್ರಶ್ನೆ ಸ್ಪರ್ಧೆಯ ವಿಶೇಷ ಆಕರ್ಷಣೆಯಾಗಿದ್ದವು.

ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಹಾಡು, ನೃತ್ಯ, ಓಣಂ ವಿಶೇಷ ಪ್ರದರ್ಶನ ಹಾಗೂ ಇತರ ಕಲಾ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಸ್ಪರ್ಧಾ ವಿಜೇತರು

ಪೂಕಳಂ ಸ್ಪರ್ಧೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.

ಭಾಷಣ ಸ್ಪರ್ಧೆಯಲ್ಲಿ ಫಾತಿಮತ್ ಫಿಝಾ ಪ್ರಥಮ ಸ್ಥಾನ ಪಡೆದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು.

ಕಾರ್ಯಕ್ರಮದ Best Performers ಪ್ರಶಸ್ತಿಯನ್ನು ಮೊಹಮ್ಮದ್ ನಹೀಮ್, ಶರ್ವರಿ ಹಾಗೂ ತ್ರಿಶಾ ಪಡೆದುಕೊಂಡರು.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಒಗ್ಗಟ್ಟಿನಿಂದ ಭಾಗವಹಿಸಿದ ಕಾರ್ಯಕ್ರಮವು ಓಣಂ ಹಬ್ಬದ ನಿಜವಾದ ಸಂದೇಶವಾದ ಏಕತೆ, ಸಮಾನತೆ, ಸಹಬಾಳ್ವೆ ಹಾಗೂ ಸಂತೋಷದ ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸಿತು.

20ನೇ ವರ್ಷದ ಓಣಂ ಆಚರಣೆಯು ವಿದ್ಯಾರ್ಥಿಗಳಿಗೆ ಕೇರಳದ ಸಾಂಸ್ಕೃತಿಕ ಪರಂಪರೆಯ ಪರಿಚಯದೊಂದಿಗೆ ವಿವಿಧತೆಯಲ್ಲಿ ಏಕತೆಯ ಮಹತ್ವವನ್ನು ಅರಿಯುವಂತಹ ಸುಂದರ ಅನುಭವವನ್ನು ನೀಡಿತು.