ವಸ್ತ್ರಚಿತ್ರ ಕಲೆಯಿಂದ ಸ್ವಾವಲಂಬನೆ ಸಾಧ್ಯ: ಪರಿಮಳ

0
5

ಉಜಿರೆ: ಕಲಾ ಕೌಶಲ್ಯವನ್ನು ಕೇವಲ ಹವ್ಯಾಸವಾಗಿ ಉಳಿಸಿಕೊಳ್ಳದೆ, ಅದನ್ನು ಸ್ವಉದ್ಯೋಗ ಹಾಗೂ ಉದ್ಯಮವಾಗಿ ಪರಿವರ್ತಿಸಿಕೊಂಡಾಗ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದು ಮುಖ್ಯ ಅತಿಥಿ ಪರಿಮಳ, ಮುಖ್ಯೋಪಾಧ್ಯಾಯರು, ಎಸ್‌ಒಎಂ ಇಂಗ್ಲಿಷ್ ಮೀಡಿಯಂ ಸ್ಕೂಲ್, ಧರ್ಮಸ್ಥಳ ಹೇಳಿದರು.

ಉಜಿರೆಯ ಸಿದ್ಧವನದಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಜುಲೈ 28ರಿಂದ ಆಗಸ್ಟ್ 27ರವರೆಗೆ ನಡೆದ ವಸ್ತ್ರಚಿತ್ರ ಕಲಾ ಲಘು ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಮಹತ್ವವಿದೆ. ತರಬೇತಿಯಲ್ಲಿ ಕಲಿತ ಕಲೆಯನ್ನು ಸೃಜನಶೀಲತೆಯೊಂದಿಗೆ ಬಳಸಿಕೊಂಡು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬೇಕು. ಮಾರುಕಟ್ಟೆಯ ಬೇಡಿಕೆಯನ್ನು ಅರಿತು ಉದ್ಯಮ ಆರಂಭಿಸುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕೇಂದ್ರ ಕಚೇರಿ, ಉಜಿರೆಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಬಿ.ಪಿ. ವಿಜಯ ಕುಮಾರ್ ಮಾತನಾಡಿ, ತರಬೇತಿಯ ಮೂಲಕ ಪಡೆದ ಕೌಶಲ್ಯವನ್ನು ಉದ್ಯಮವಾಗಿ ರೂಪಿಸಿಕೊಂಡು ಸ್ವಉದ್ಯೋಗದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು. ಕೌಶಲ್ಯದ ಜೊತೆಗೆ ಗುಣಮಟ್ಟ, ಹೊಸತನ, ಗ್ರಾಹಕ ಸೇವೆ ಹಾಗೂ ಮಾರುಕಟ್ಟೆ ಜ್ಞಾನವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ರುಡ್‌ಸೆಟ್ ಸಂಸ್ಥೆ, ಉಜಿರೆಯ ನಿರ್ದೇಶಕ ಸುನಿಲ್ ಜಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿಯ ಉದ್ದೇಶ ಹಾಗೂ ತರಬೇತಿ ಪೂರ್ಣಗೊಂಡ ಬಳಿಕ ಶಿಬಿರಾರ್ಥಿಗಳಿಗೆ ದೊರೆಯಬಹುದಾದ ಸ್ವಉದ್ಯೋಗದ ಅವಕಾಶಗಳ ಕುರಿತು ವಿವರಿಸಿದರು.

ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಧನ್ಯವಾದ ಸಮರ್ಪಿಸಿದರು. ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಶಿಬಿರಾರ್ಥಿಗಳಾದ ಕುಮಾರಿ ವೀಕ್ಷಾ ಮತ್ತು ಬಳಗ ಪ್ರಾರ್ಥನೆ ನೆರವೇರಿಸಿದರು. ಕುಮಾರಿ ಕವನ ಹಾಗೂ ಕುಮಾರಿ ಅನ್ವಿತಾ ತರಬೇತಿಯ ಅನುಭವವನ್ನು ಹಂಚಿಕೊಂಡರು. ತರಬೇತಿ ಅವಧಿಯಲ್ಲಿ ಪಡೆದ ಕೌಶಲ್ಯ ಹಾಗೂ ಮಾರ್ಗದರ್ಶನವು ಸ್ವಉದ್ಯೋಗ ಆರಂಭಿಸಲು ಆತ್ಮವಿಶ್ವಾಸ ಮೂಡಿಸಿದೆ ಎಂದು ಅವರು ತಿಳಿಸಿದರು.

ರುಡ್‌ಸೆಟ್ ಸಂಸ್ಥೆಯ 999ನೇ ಬ್ಯಾಚ್ ಆಗಿ ನಡೆದ ಈ ತರಬೇತಿಯು ಶಿಬಿರಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಯ ಜೊತೆಗೆ ಸ್ವಉದ್ಯೋಗ ಹಾಗೂ ಉದ್ಯಮಶೀಲತೆಯ ಮನೋಭಾವ ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಯಿತು. ತರಬೇತಿಯ ಮೂಲಕ ಕಲಿತ ವಸ್ತ್ರಚಿತ್ರ ಕಲೆಯನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಶಿಬಿರಾರ್ಥಿಗಳಿಗೆ ಉತ್ತಮ ಅವಕಾಶ ದೊರೆತಂತಾಗಿದೆ.