
ಕುಮಟಾ: ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ವೈಭವವನ್ನು ರಾಷ್ಟ್ರಮಟ್ಟದಲ್ಲಿ ಅನಾವರಣಗೊಳಿಸುವ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ–2026 ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.
ಸಮ್ಮೇಳನ ಉದ್ಘಾಟಿಸಿದ ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಐಎಎಸ್ ಮಾತನಾಡಿ, ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸಲು ಪ್ರತಿಯೊಬ್ಬ ಕನ್ನಡಿಗನೂ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕನ್ನಡಕ್ಕಾಗಿ ಶ್ರಮಿಸಬೇಕು. ಕನ್ನಡವನ್ನು ಕೇವಲ ಅಭಿಮಾನದ ಭಾಷೆಯಾಗಿ ಉಳಿಸದೆ, ಓದು, ಬರಹ, ಮಾತುಕತೆ ಸೇರಿದಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಬಳಸಬೇಕು. ಮುಂದಿನ ಪೀಳಿಗೆಗೆ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ಎಲ್ಲರ ಜವಾಬ್ದಾರಿ ಎಂದರು.
ಕನ್ನಡಕ್ಕಾಗಿ ತಾವು ಕೈಗೊಂಡಿರುವ ವಿವಿಧ ಚಟುವಟಿಕೆಗಳನ್ನು ವಿವರಿಸಿದ ಅವರು, ಮುಂದೆಯೂ ಹಲವು ಕನ್ನಡಪರ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವ ಇರಾದೆ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷ ಮೈಸೂರಿನ ಖ್ಯಾತ ಕವಿ, ಗಾಯಕ ಹಾಗೂ ಸಂಶೋಧಕ ಡಾ. ಕಾ. ರಾಮೇಶ್ವರಪ್ಪ (ಸಿರಿಗಂಧ) ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ಸಂಸ್ಕೃತಿಯ ಐತಿಹಾಸಿಕ ಹಿನ್ನೆಲೆ ಹಾಗೂ ಭಾರತದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಕನ್ನಡದ ವಿಶಿಷ್ಟ ಸ್ಥಾನವನ್ನು ವಿವರಿಸಿದರು. ಉತ್ತರ ಕನ್ನಡದ ಪ್ರಕೃತಿ, ಜೀವವೈವಿಧ್ಯ, ಜನಪದ, ಕಲೆ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಪ್ರಸ್ತಾಪಿಸಿದ ಅವರು, ಸಾಹಿತ್ಯ ಮತ್ತು ಸಂಸ್ಕೃತಿ ಜನಮನಗಳನ್ನು ಬೆಸೆಯುವ ಸೇತುವೆಗಳಾಗಿವೆ ಎಂದರು.
ಕುಮಟಾದ ಸಾಹಿತ್ಯಿಕ ಮಹತ್ವವನ್ನು ಸ್ಮರಿಸಿದ ಅವರು, 1955ರಲ್ಲಿ 35ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುಮಟಾದಲ್ಲಿ ನಡೆದಿರುವುದು ಈ ನೆಲದ ಸಾಹಿತ್ಯಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದರು. ಕನ್ನಡ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಭಾಷೆ, ಕಲೆ, ಸಾಹಿತ್ಯ, ಜಾನಪದ, ಸಂಪ್ರದಾಯ ಹಾಗೂ ಮೌಲ್ಯಗಳ ವೈವಿಧ್ಯವನ್ನು ಒಳಗೊಂಡಿದೆ ಎಂದು ಹೇಳಿದರು.
ಮಂಜುನಾಥ್ ಎಜುಕೇಶನ್ ಟ್ರಸ್ಟ್, ರೋಟರಿ ಕ್ಲಬ್ ಕುಮಟಾ, ಕನ್ನಡ ಸಾಹಿತ್ಯ ಪರಿಷತ್ ಉತ್ತರ ಕನ್ನಡ ಮತ್ತು ಹೃದಯ ವಾಹಿನಿ ಕರ್ನಾಟಕ ಸಂಘಟನೆಗಳು ಸಂಯುಕ್ತವಾಗಿ ಸಮ್ಮೇಳನವನ್ನು ಆಯೋಜಿಸಿದ್ದವು.
ರೋಟರಿ ಕ್ಲಬ್ ಅಧ್ಯಕ್ಷ ಸಿಎ. ವಿನಾಯಕ ಹೆಗಡೆ ಮಾತನಾಡಿ, ಕುಮಟಾ ರೋಟರಿ ಕ್ಲಬ್‌ನ ಸಹಯೋಗದಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದ್ದು, ಇಂತಹ ಕಾರ್ಯಕ್ರಮಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿವೆ ಎಂದರು.
ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ರೋಹಿದಾಸ ನಾಯಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹೃದಯವಾಹಿನಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಸಾಗರ್ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಜನಪದ, ಸಂಗೀತ, ನೃತ್ಯ, ಹಾಸ್ಯ ಮತ್ತು ಕಾವ್ಯದ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವು ಕನ್ನಡದ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂಬ ಸಂದೇಶವನ್ನು ಸಾರಿದೆ ಎಂದರು.
ರಾಜ್ಯಮಟ್ಟದ ಗಾಯಕಿ ಸಂಧ್ಯಾ ಹೆಗಡೆ ಪ್ರಾರ್ಥಿಸಿದರು. ವಾಣಿಜ್ಯೋದ್ಯಮಿ ಗಣಪತಿ ಭಾಗ್ವತ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪುಟ್ಟು ಕುಲಕರ್ಣಿ, ಶ್ರೀಧರ ಬಳಗಾರ, ನಾಗರಾಜ ನಾಯ್ಕ ಕಾಗಾಲ, ಶಿವಸ್ವಾಮಿ ಎನ್.ಆರ್., ಭಾಷಾ ಪಟೇಲ್ ಹಾಗೂ ವಿಕ್ರಮ ಆರ್. ನಾಯ್ಕ ಅವರನ್ನು ಸಾಹಿತ್ಯ, ಸಂಶೋಧನೆ, ಸಂಘಟನೆ, ಸಮಾಜಸೇವೆ ಹಾಗೂ ಕಾನೂನು ಕ್ಷೇತ್ರಗಳ ಸಾಧನೆಗಾಗಿ ಸನ್ಮಾನಿಸಲಾಯಿತು.
ಪ್ರೊ. ಟಿ.ಜಿ. ಭಟ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪಿ.ಆರ್. ನಾಯ್ಕ, ಎನ್.ಆರ್. ಗಜು, ರವೀಂದ್ರ ಭಟ್ ಸೂರಿ, ವೆಂಕಟೇಶ್ ಬೈಲೂರು, ಎಂ.ಕೆ. ಲಕ್ಷ್ಮಿ, ಸಂಧ್ಯಾ ಭಟ್, ಗಣಪತಿ ಕೊಂಡದಕುಳಿ, ನಾಗರಾಜ ನಾಯಕ ಹಾಗೂ ಮಮತಾ ನಾಯ್ಕ ಕವನ ವಾಚಿಸಿದರು.
ಇದೇ ಸಂದರ್ಭದಲ್ಲಿ ರೋಹಿದಾಸ ನಾಯಕರ ‘ಸೌಗಂಧಿಕ’ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಸಮ್ಮೇಳನಾಧ್ಯಕ್ಷ ಡಾ. ಕಾ. ರಾಮೇಶ್ವರಪ್ಪ ಅವರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಂಬಾಶ್ರೀ ನೃತ್ಯ ಮತ್ತು ಸಂಗೀತ ಶಾಲೆಯಿಂದ ನೃತ್ಯ-ಗಾಯನ, ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರ ‘ನಗೆ ಹೊನಲು’, ಕುಮಟಾದ ನೃತ್ಯಸ್ವರ ಕಲಾಟ್ರಸ್ಟ್ ವತಿಯಿಂದ ವಿದುಷಿ ವಿಜೇತಾ ಭಂಡಾರಿ ನಿರ್ದೇಶನದ ನೃತ್ಯರೂಪಕ ಗಮನ ಸೆಳೆದವು.
ಮೈಸೂರಿನ ಶ್ರೀ ಸರಸ್ವತಿ ವಾದ್ಯವೃಂದದಿಂದ ‘ಲಯ–ನಾದ–ತರಂಗ’ ಸಂಗೀತ ಕಾರ್ಯಕ್ರಮ ಹಾಗೂ ಸಂತೆಬೆನ್ನೂರಿನ ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯಿಂದ ಮಲ್ಲಕಂಬ ಪ್ರದರ್ಶನವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಗೀತ, ಜನಪದ ಹಾಗೂ ಸಂಸ್ಕೃತಿಯ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಸಮ್ಮೇಳನವು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ಸಂದೇಶದೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ರವಿ ಎಂ. ಕುಲಶೇಖರ ನಿರೂಪಿಸಿದರು. ಕುಮಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಮೋದ ನಾಯ್ಕ ವಂದಿಸಿದರು.
