ಸಂಜೀವಿನಿ ಒಕ್ಕೂಟದಲ್ಲಿ 23 ಲಕ್ಷ ರೂ. ವಂಚನೆ..!

0
7

ಉಡುಪಿ: ಸ್ವಸಹಾಯ ಸಂಘಗಳ ಮಹಿಳೆಯರ ಸ್ವಾವಲಂಬನೆಗಾಗಿ ಸರ್ಕಾರ ನೀಡಿದ್ದ ಅನುದಾನ ಹಾಗೂ ಸದಸ್ಯರು ಮರುಪಾವತಿಸಿದ 23 ಲಕ್ಷ ರೂ. ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಪೆರ್ಡೂರು ಪದ್ಮ ಕಮಲ ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರ್ತಿ ವಿರುದ್ಧ ಹಿರಿಯಡ್ಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಕ್ಕೂಟದ ಮುಖ್ಯ ಬರಹಗಾರ್ತಿ (ಬುಕ್​ ಕೀಪರ್​) ಸುಗಂಧಿ ಎಂಬಾಕೆ ಆರೋಪಿ. ಒಕ್ಕೂಟದ ಅಧ್ಯಕ್ಷೆ ಶ್ಯಾಮಲಾ ಎಸ್​.ಪಿ. ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿ

ಪೆರ್ಡೂರು ಪದ್ಮ ಕಮಲ ಸಂಜೀವಿನಿ ಒಕ್ಕೂಟವು 2020 ರ ಅಕ್ಟೋಬರ್​ 19 ರಂದು ಅಸ್ತಿತ್ವಕ್ಕೆ ಬಂದಿದ್ದು, ಸೊಸೈಟಿ ಆಕ್ಟ್​ ಪ್ರಕಾರ ನೋಂದಣಿಯಾಗಿದೆ. ಈ ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 68 ಸ್ವಸಹಾಯ ಗುಂಪುಗಳಿದ್ದು, 632 ಮಹಿಳಾ ಸದಸ್ಯರಿದ್ದಾರೆ. ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಸದಸ್ಯರಿಗೆ ಶೇ.9 ರ ಬಡ್ಡಿದರದಲ್ಲಿ ಜೀವನೋಪಾಯ ಸಾಲ ವಿತರಿಸಲು ಒಕ್ಕೂಟದ ಬ್ಯಾಂಕ್​ ಖಾತೆಗೆ ಸರ್ಕಾರದಿಂದ ಇದುವರೆಗೆ ಒಟ್ಟು 42 ಲಕ್ಷ ರೂ. ಹಣ ಬಿಡುಗಡೆಯಾಗಿತ್ತು. ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಜಂಟಿಯಾಗಿ ಖಾತೆ ನಿರ್ವಹಿಸುತ್ತಿದ್ದರು.

ದಾಖಲಾತಿ ನಿರ್ವಹಣೆಯ ಹೊಣೆ ಸುಗಂಧಿ ಮೇಲಿತ್ತು. ಆರೋಪಿತೆ ಸುಗಂಧಿ 2023 ರಿಂದ 2025ರ ಅವಧಿಯಲ್ಲಿ ವಿವಿಧ ಸಂಘಗಳ ಸದಸ್ಯರು ಸಾಲ ಮರುಪಾವತಿಸಿದ ಹಣವನ್ನು ಬ್ಯಾಂಕ್​ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾಳೆ. ಸದಸ್ಯರು ಕೇಳಿದ ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ದಾಖಲೆಗಳಲ್ಲಿ ನಮೂದಿಸಿ, ಅದಕ್ಕಾಗಿ ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ನಕಲಿ ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕಿಗೆ ಸಲ್ಲಿಸಿ ಸಾಲ ಮಂಜೂರು ಮಾಡಿಸಿಕೊಂಡು, ಸದಸ್ಯರಿಗೆ ಅವರು ಕೇಳಿದಷೆ್ಟೇ ಹಣ ನೀಡಿ, ಉಳಿದ ಹೆಚ್ಚುವರಿ ಹಣವನ್ನು ತನ್ನ ವೈಯಕ್ತಿಕ ಬಳಕೆಗೆ ಇಟ್ಟುಕೊಂಡಿದ್ದಾಳೆ. ಈಕೆ ವ್ಯವಹಾರಕ್ಕೆ ಒಂದು ಮತ್ತು ಸಮಿತಿಗೆ ತೋರಿಸಲು ಮತ್ತೊಂದು ಪ್ರತ್ಯೇಕ ಪುಸ್ತಕಗಳನ್ನು ನಿರ್ವಹಿಸುತ್ತಾ ಬಂದಿದ್ದಾಳೆ. ಈ ಮೂಲಕ ವಿವಿಧ ಸಂಘಗಳಲ್ಲಿ ಒಟ್ಟು 23 ಲಕ್ಷ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here