ಶಿವಮೊಗ್ಗ : ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಆರು ವರ್ಷದ ಬಾಲಕ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ತ್ರಿಲೋಕ್ ಜೈನ್ (6) ಎಂದು ಗುರುತಿಸಲಾಗಿದೆ. ಆತ ಹಾಳಸಸಿ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಯಾಗಿದ್ದು, ಕೊಡನವಳ್ಳಿ ಗೌತಮ್ ಮತ್ತು ಶಿಲ್ಪಾ ದಂಪತಿಯ ಪುತ್ರನಾಗಿದ್ದಾನೆ.
ಸೋಮವಾರ ಶಾಲಾ ಆವರಣದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ತ್ರಿಲೋಕ್ ಏಕಾಏಕಿ ಅಸ್ವಸ್ಥಗೊಂಡು ನೆಲಕ್ಕುರುಳಿದ್ದಾನೆ. ತಕ್ಷಣ ಶಿಕ್ಷಕರು ಹಾಗೂ ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರೂ, ಮಾರ್ಗಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕನ ಸಾವಿಗೆ ಹೃದಯಾಘಾತ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ. ತ್ರಿಲೋಕ್‌ಗೆ ಈ ಹಿಂದೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಇತ್ತೇ ಎಂಬ ಮಾಹಿತಿಯೂ ಇನ್ನಷ್ಟೇ ಲಭ್ಯವಾಗಬೇಕಿದೆ.
ಈ ದುರ್ಘಟನೆ ಶಾಲೆ ಹಾಗೂ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದ್ದು, ಬಾಲಕನ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

