ನವದೆಹಲಿ : ದೇಶದಲ್ಲಿ ರಸ್ತೆ ಅಪಘಾತಗಳಿಂದಾಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎರಡು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ರಸ್ತೆ ಅಪಘಾತದ ವೇಳೆ ತಕ್ಷಣ ಸ್ಪಂದಿಸಿ ಗಾಯಾಳುಗಳ ಜೀವ ಉಳಿಸಲು ನೆರವಾಗುವ ಸಾರ್ವಜನಿಕರಿಗೆ ₹25,000 ನಗದು ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸಚಿವ Nitin Gadkari ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರತಿವರ್ಷ ಸುಮಾರು 1.8 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದು, ಸುಮಾರು 5 ಲಕ್ಷ ಅಪಘಾತಗಳು ಸಂಭವಿಸುತ್ತಿವೆ ಎಂದು ಏಮ್ಸ್ ವೈದ್ಯರ ನೇತೃತ್ವದ ಸಮಿತಿಯ ವರದಿಯನ್ನು ಉಲ್ಲೇಖಿಸಿದರು.
ಅಪಘಾತಕ್ಕೊಳಗಾದವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿದರೆ ಶೇ.30ರಷ್ಟು ಜೀವಗಳನ್ನು ಉಳಿಸಬಹುದಾಗಿದೆ. ಅಂದರೆ, ವರ್ಷಕ್ಕೆ ಸುಮಾರು 50 ಸಾವಿರ ಜನರ ಜೀವ ರಕ್ಷಣೆ ಸಾಧ್ಯ ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ರಸ್ತೆ ಅಪಘಾತದ ವೇಳೆ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡುವವರಿಗೆ ‘ರಾಹವೀರ್ ಯೋಜನೆ’ ಅಡಿಯಲ್ಲಿ ₹25,000 ಬಹುಮಾನ ನೀಡಲಾಗುತ್ತದೆ. ಜೊತೆಗೆ, ಅಪಘಾತಕ್ಕೊಳಗಾದವರಿಗೆ ₹1.5 ಲಕ್ಷದವರೆಗೆ ಉಚಿತ ತುರ್ತು ಚಿಕಿತ್ಸೆ ಒದಗಿಸುವ ಮತ್ತೊಂದು ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಕೇಂದ್ರ ಸರ್ಕಾರದ ಈ ಹೊಸ ಕ್ರಮಗಳು ರಸ್ತೆ ಅಪಘಾತಗಳಿಂದಾಗುವ ಸಾವು-ನೋವುಗಳನ್ನು ಕಡಿಮೆ ಮಾಡುವ ಜೊತೆಗೆ, ಗಾಯಾಳುಗಳ ನೆರವಿಗೆ ಧಾವಿಸುವ ಮಾನವೀಯ ಮನೋಭಾವವನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ.

