ಬೆಂಗಳೂರು : ನಗರದ ಕುರುಬರಹಳ್ಳಿಯ ಕೈಗಾರಿಕಾ ಶೆಡ್‌ವೊಂದರಲ್ಲಿ ದಾಖಲೆಗಳಿಲ್ಲದೆ ಬಚ್ಚಿಡಲಾಗಿದ್ದ ₹2.98 ಕೋಟಿ ನಗದು ಹಣವನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಣದ ಮೂಲ ಹಾಗೂ ಉದ್ದೇಶದ ಕುರಿತು ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ಆರಂಭಿಸಿದ್ದಾರೆ.
ಜೂನ್ 2ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಪಿಎಸ್‌ಐ ರಾಕೇಶ್ ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ, ಕುರುಬರಹಳ್ಳಿಯ 11ನೇ ಕ್ರಾಸ್‌ನಲ್ಲಿರುವ ‘ಶೇಷಾದ್ರಿ ಇಂಡಸ್ಟ್ರೀಸ್’ ಹೆಸರಿನ ಕೈಗಾರಿಕಾ ಶೆಡ್‌ನಲ್ಲಿ ಭಾರೀ ಪ್ರಮಾಣದ ನಗದು ಹಣ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ದೊರೆತಿತ್ತು.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶೆಡ್‌ನಲ್ಲಿ ತಪಾಸಣೆ ನಡೆಸಿದಾಗ, ನಾಲ್ಕು ದೊಡ್ಡ ಬ್ಯಾಗ್‌ಗಳಲ್ಲಿ ತುಂಬಿಟ್ಟಿದ್ದ ನೋಟುಗಳ ಕಂತೆಗಳು ಪತ್ತೆಯಾಗಿವೆ. ಬಳಿಕ ಹಣವನ್ನು ಠಾಣೆಗೆ ತಂದು ಎಣಿಕೆ ನಡೆಸಿದಾಗ ಒಟ್ಟು ₹2,98,00,900 (2.98 ಕೋಟಿ ರೂಪಾಯಿ) ಇರುವುದು ದೃಢಪಟ್ಟಿದೆ.
ಪ್ರಾಥಮಿಕ ತನಿಖೆಯಲ್ಲಿ ಈ ಹಣವು ತಾವರೆಕೆರೆ ನಿವಾಸಿ ನಾಗರಾಜ್ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ನಾಗರಾಜ್ ಈ ಹಣವನ್ನು ಕುರುಬರಹಳ್ಳಿಯಲ್ಲಿರುವ ತನ್ನ ಸ್ನೇಹಿತ ವೆಂಕಟೇಶ್‌ಗೆ ಸೇರಿದ ಶೆಡ್‌ನಲ್ಲಿ ಇಟ್ಟಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಹಣಕ್ಕೆ ಸಂಬಂಧಿಸಿದ ಯಾವುದೇ ಮಾನ್ಯ ದಾಖಲೆಗಳನ್ನು ಆರೋಪಿಗಳು ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ, ಪೊಲೀಸರು ತಕ್ಷಣ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಸ್ತುತ, ಈ ಕೋಟ್ಯಂತರ ರೂಪಾಯಿ ನಗದು ಹಣದ ಮೂಲ, ಅದರ ಬಳಕೆಯ ಉದ್ದೇಶ ಹಾಗೂ ಯಾವುದೇ ಅಕ್ರಮ ವ್ಯವಹಾರದ ಸಂಪರ್ಕವಿದೆಯೇ ಎಂಬ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ತನಿಖೆ ಮುಂದುವರಿಸಿದ್ದಾರೆ.

